SRIMADHVYASA

Home » Swapnavrindavanakhyana-Kannada Translation-NagabhushanaRao

Swapnavrindavanakhyana-Kannada Translation-NagabhushanaRao

This image has an empty alt attribute; its file name is vadirajagood-kmsheshagiri.jpg

Extract of Introduction given by Sri Nagabhushana Rao (The author who translated SwapnaVrindavanaKhyana to kannada)

ಶ್ರೀವಾದಿರಾಜ ಗುರುಸಾರ್ವಭೌಮರು, ತಾವು ವೃನ್ದಾವನ ಪ್ರವೇಶಿಸಿದ ಕೆಲವು ವರ್ಷಗಳ ನಂತರ, ತಮ್ಮ ಕಾಲದಲ್ಲಿ ತಮ್ಮ ಸೇವೆಯನ್ನು ಮಾಡಿಕೊಂಡಿದ್ದ, ಒಬ್ಬ ತೌಳವ ಏಡಮೂಕ ವಿಪ್ರನಿಗೆ, ರಾತ್ರಿ ಅವನ ಸ್ವಪ್ನದಲ್ಲಿ ಆಗಿಂದಾಗ್ಯೆ ಕಾಣಿಸಿಕೊಂಡು, ತಮ್ಮ ಮಹಾತ್ಮ್ಯವನ್ನು ತಿಳಿಸುವ ಪಠಿಸುವವರಿಗೆ ಸರ್ವಸಿದ್ಧಿಯನ್ನೀಯುವ ತಮ್ಮ ಆತ್ಮವೃತ್ತಾಂತವನ್ನು ಶ್ರವಣ ಮಾಡಿಸಿ, ಪ್ರಾತಃ ಕಾಲದಲ್ಲಿ ಅವನಿಗೆ ವಾಕ್ಶಕ್ತಿಯನ್ನಿತ್ತು, ಅಂದು ಗುರುಗಳಾಗಿದ್ದ ವೇದನಿಧಿಗಳ ಮುಂದೆ, ಅವನಿಂದ ಸ್ವಪ್ನಕಾಲದಲ್ಲಿ ಶ್ರವಣವಾದುದನ್ನು ಹೇಳಿಸುತ್ತಿದ್ದರು. ಈ ರೀತಿಯಾಗಿ ಏಡಮೂಕ ವಿಪ್ರನಿಂದ ಸುಮಾರು 2250 ಶ್ಲೋಕಗಳು ಹೇಳಿಸಲ್ಪಟ್ಟವು. ಸುಮಾರು ಕ್ರಿ.ಶ. 1630ರಲ್ಲಿ ಪ್ರಾರಂಭವಾಗಿ ಸುಮಾರು ಕ್ರಿ.ಶ. 1642ರಲ್ಲಿ ಸಮಾಪ್ತವಾಗಿ “ಸ್ವಾತ್ಮವೃನ್ದಾವನಾಖ್ಯಾನ”ವೆಂಬ ಮಂತ್ರತುಲ್ಯ ಮಹಾನ್ ಸಂಸ್ಕೃತ ಗ್ರಂಥವು ರಚಿತವಾಯಿತು.

ಈ ಗ್ರಂಥದಲ್ಲಿ 22 ಅಧ್ಯಾಯಗಳಿವೆ. ಮೊದಲನೆ ನಾಲ್ಕು ಅಧ್ಯಾಯಗಳು ಭಜನ ಪರ್ವಗಳು, ಒಂದು ಮತ್ತು ಐದರಿಂದ ಹನ್ನೊಂದನೇ ಅಧ್ಯಾಯ ಪೂರ್ತಿಯಾಗಿ ವೈಭವಪರ್ವಗಳು. ಒಂದು ಮತ್ತು ಹನ್ನೆರಡರಿಂದ ಇಪ್ಪತ್ತೆರಡನೆ ಅಧ್ಯಾಯ ಪೂರ್ತಿಯಾಗಿ ನಿದರ್ಶನ ಪರ್ವಗಳು. ಮೊದಲನೆಯ ಅಧ್ಯಾಯವು ಪೀಠದಂತೆ ಅವತಾರಿಕಾರೂಪವಾಗಿದೆ. ಈ ಅಧ್ಯಾಯದಲ್ಲಿ ಎಲ್ಲಾ ಅಧಿಕಾರಿಗಳು ಭಜಿಸಬೇಕಾದ ಭಗವದ್ರೂಪಗಳ ಸ್ತುತಿವರ್ಣನಗಳಿವೆ. ಈ ಅಧ್ಯಾಯದಲ್ಲಿ ಶ್ರೀವಾದಿರಾಜರು, ರುದ್ರಾದಿ ಸಕಲದೇವೋಪಾಸ್ಯ ವಿಷ್ಣುವಿನ ಪ್ರತೀಕವೆನ್ನುವುದನ್ನು ಪ್ರದರ್ಶಿಸುವ ಮೂಲಕ, ತಾನು ಋಜುದೇವತೆ ಎನ್ನುವುದನ್ನು ತಿಳಿಸಿದ್ದಾರೆ. ಪರಮಾತ್ಮನ ಸಕಲರೂಪಗಳು ಮತ್ತು ಎಲ್ಲಾ ದೇವತೆಗಳ ಸನ್ನಿಧಾನವುಳ್ಳ, ತಾನು ಪ್ರವೇಶಿಸಿದ ವೃನ್ದಾವನ ಮತ್ತು ಧವಳಗಂಗಾ ಮಹಿಮೆಯನ್ನು ವರ್ಣಿಸಿದ್ದಾರೆ. ಎರಡನೆಯ ಅಧ್ಯಾಯದಲ್ಲಿ ಹಯವದನಾತ್ಮಕ ತ್ರಿವಿಕ್ರಮನ ಉತ್ಸವರೂಪ ಭಜನ ಪ್ರಕಾರವು ಉಕ್ತವಾಗಿದೆ. ಮೂರನೆಯ ಅಧ್ಯಾಯದಲ್ಲಿ ಸರ್ವಸಿದ್ಧಿದಾಯಕ ವಾದಿರಾಜ ಗುರುಮಂತ್ರ ಜಪವು ಅದಕ್ಕೆ ಸಂಗತವಾದ ಲೌಕಿಕ ವಿಷಯಗಳು ಪ್ರತಿಪಾದಿತವಾಗಿವೆ. ನಾಲ್ಕನೆಯ ಅಧ್ಯಾಯದಲ್ಲಿ ಬಾದರಾಯಣರ ದರ್ಶನ ಪ್ರಕಾರ ಹೇಳಿರುವುದರಿಂದ ಅಪರೋಕ್ಷಜ್ಞಾನಲಾಭ ಪ್ರಕಾರವು ಸೂಚಿತವಾಗಿದೆ. ಈ ಭಜನ ಪರ್ವದ ಅಧ್ಯಾಯಗಳಲ್ಲಿ ದೇವತೆಗಳಿಂದ ತಮ್ಮ ಆಭರಣ ವಾಹನಾದಿಗಳ ಪ್ರಾಪ್ತಿ ವಿಚಾರವನ್ನೂ, ಅವುಗಳ ಧ್ಯಾನದಿಂದ ಪ್ರಾಪ್ತವಾಗುವ ಲೌಕಿಕ ಅಲೌಕಿಕ ಫಲಗಳನ್ನೂ ತಿಳಿಸಿದ್ದಾರೆ. ಭಕ್ತರ ಶತ್ರು ನಿಗ್ರಹಕ್ಕಾಗಿ ಶ್ರೀಕೃಷ್ಣ ಹಯಗ್ರೀವ ರೂಪಗಳ ಸ್ತೋತ್ರವೂ, ರಾಜ್ಯಪ್ರಾಪ್ತಿಗಾಗಿ ಶ್ರೀರಾಮರೂಪದ ಸ್ತೋತ್ರವೂ, ಅಜ್ಞಾನ ನಿವೃತ್ತಿ, ಜ್ಞಾನ ಪ್ರಾಪ್ತಿಗೆ ವೇದವ್ಯಾಸರೂಪ ಸ್ತೋತ್ರವೂ ಹೀಗೆ ಬೇರೆ ಬೇರೆ ಕಾರ್ಯೋದ್ದೇಶಗಳಿಗಾಗಿ ಬೇರೆ ಬೇರೆ ಹರಿಯ ರೂಪಗಳ ಸ್ತೋತ್ರಗಳಿವೆ.

ವೈಭವ ಪರ್ವಗಳಲ್ಲಿ ಶ್ರೀವಾದಿರಾಜರ ಭೌಮ (ಭೂಲೋಕದ) ವೈಭವಗಳು ಮತ್ತು ದಿವ್ಯ (ದೇವಲೋಕದ) ವ್ಯಭವಗಳು, ಹಾಗೆಯೇ ಭಾಗವತ (ಭಗವದಾರಾಧಕತ್ವ) ವ್ಯಭವಗಳು ಮತ್ತು ಭಾಕ್ತ (ಭಕ್ತಾನುಗ್ರಾಹಕತ್ವ) ವ್ಯಭವಗಳು ವರ್ಣಿತವಾಗಿವೆ. ಈ ವೈಭವಗಳನ್ನು ಶ್ರವಣ ಮಾಡುವವರಿಗೆ ಪ್ರಾಪ್ತವಾಗುವ ಫಲವೂ ಉಕ್ತವಾಗಿದೆ. ಹನ್ನೆರಡನೆಯ ಅಧ್ಯಾಯದಿಂದ ಇಪ್ಪತ್ತೆರಡನೆಯ ಅಧ್ಯಾಯ ಪೂರ್ತಿ (ಅಂದರೆ ಗ್ರಂಥಪೂರ್ತಿಯಾಗಿ) ಪೂರ್ವೋಕ್ತಾರ್ಥದಲ್ಲಿ ನಿಶ್ಚಯವನ್ನುಂಟು ಮಾಡಲು ನಿದರ್ಶನಗಳು ಹೇಳಲ್ಪಟ್ಟಿವೆ. ಸ್ವಾಪ್ನಗ್ರಂಥವಾದ ಪ್ರಯುಕ್ತ ಉಕ್ತವಾದ ನಿದರ್ಶನಗಳು ಭವಿಷ್ಯಸೂಚಕ ರೀತಿಯಲ್ಲಿದ್ದು, ಏಡಮೂಕ ವಿಪ್ರನು ವೃನ್ದಾವನಾಚಾರ್ಯರಾಗಿ ಜನ್ಮತಾಳಿದಾಗ, ಅವುಗಳು ಪ್ರತ್ಯಕ್ಷ ಅನುಭವಕ್ಕೆ ಬಂದಿವೆ. ಭಜನ, ವೈಭವ, ನಿದರ್ಶನ ಪರ್ವಗಳೆಂಬ ಮೂರು ವಿಭಾಗಗಳಿದ್ದರೂ ವ್ಯಭವಾದಿಗಳು ಮೂರು ವಿಭಾಗಗಳಲ್ಲಿಯೂ ಹೇಳಲ್ಪಟ್ಟಿವೆ.

ಈ ಗ್ರಂಥವು 1642ರಲ್ಲಿಯೇ ಜನ್ಮ ತಾಳಿದರೂ, ಗ್ರಂಥವು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಗ್ರಂಥದಲ್ಲಿರುವ ಪುನರುಕ್ತಿಗೆ ಕಾರಣವು ತಿಳಿದಿರಲಿಲ್ಲ. ಈ ಏಡಮೂಕ ವಿಪ್ರನೇ ಕ್ರಿ.ಶ. 1776ರಲ್ಲಿ ಜನಿಸಿ, 1788ರಲ್ಲಿ ಸೋದೆ ಮಠದ ಗುರು ಪೀಳಿಗೆಯಲ್ಲಿ ಶ್ರೀವಿಶ್ವಪ್ರಿಯತೀರ್ಥರೆಂಬ ಹೆಸರಿನಿಂದ ಯತಿಗಳಾಗಿ ಸೇರಿದರು. ಅವರು ಸೋದೆಯಲ್ಲಿ 48 ದಿನಗಳ ಕಾಲ ವಾದಿರಾಜರ ವೃನ್ದಾವನ ಸೇವೆ ಮಾಡುತ್ತಾ, ಸರ್ವಮೂಲಗ್ರಂಥ ಪಾರಾಯಣ ಮಾಡಿ, ಉಡುಪಿಗೆ ಹಿಂತಿರುಗುವ ಮುನ್ನ, ವೃನ್ದಾವನವನ್ನು ನಮಸ್ಕರಿಸಿದಾಗ, ವೃನ್ದಾವನದಿಂದ ಮಂತ್ರಾಕ್ಷತೆಗಳು ಅವರ ಶಿರಸ್ಸಿನ ಮೇಲೆ ಬಿದ್ದವು. ಅವರಿಗೆ ಕೂಡಲೆ ಜಾತಿಸ್ಮೃತಿ ಬಂದಿತು. ಮೂಕಜನ್ಮದ ಜ್ಞಾನವೆಲ್ಲಾ ಪ್ರಕಾಶವಾಯಿತು. ಅಲ್ಲಿಂದಾಚೆಗೆ ಅವರು ವೃನ್ದಾವನಾಚಾರ್ಯರೆಂಬ ಹೆಸರನ್ನು ಪಡೆದು ಪ್ರಸಿದ್ಧರಾದರು. ವಿಪ್ರನಿಗೆವೃನ್ದಾವನಾಚಾರ್ಯನೆಂಬ ಹೆಸರು ಯತಿಜನ್ಮದಲ್ಲಿ ಬರುವುದಂದೂ ಈ ಗ್ರಂಥದ ನಿದರ್ಶನ ಪರ್ವದಲ್ಲಿ ಸೂಚಿತವಾಗಿದೆ. ವೃನ್ದಾವನಾಚಾರ್ಯರು ಸ್ವಾಪ್ನವೃನ್ದಾವನಾಖ್ಯಾನ ಗ್ರಂಥಕ್ಕೆ ಅವರ ಶಿಷ್ಯರಾದ ಶ್ರೀಮುಷ್ಣಾಚಾರ್ಯರಿಂದ ವ್ಯಾಖ್ಯಾನವನ್ನು ಮಾಡಿಸಿದರು. ತನ್ನ ಇನ್ನೊಬ್ಬ ಶಿಷ್ಯರಾದ ಭೀಮನಕಟ್ಟೆ ಮಠದ ಸ್ವಾಮಿಗಳಾದ ಶ್ರೀ ರಘುಪ್ರವೀರರಿಂದಪ್ರಾಮಾಣ್ಯಬೋಧಿನೀಗ್ರಂಥವನ್ನು ಬರೆಸಿದರು. ಪ್ರಕರಣಗಳನ್ನು ವಿಂಗಡಿಸಿ, ಒಗಟು ಶ್ಲೋಕಗಳಿಗೆ ಅರ್ಥವನ್ನು ತಿಳಿಸಿದರು.

ಈ ಗ್ರಂಥವನ್ನು ಅವಲೋಕಿಸುವಾಗ ಸ್ವಪ್ನದಲ್ಲಿ ಅನೇಕ ಜನರಿಗೆ ಬೋಧಿಸಿರುವುದು ಕಂಡು ಬರುತ್ತದೆ. ಶ್ರೀವಾದಿರಾಜರು ವಿಪ್ರನಿಗೆ ಸ್ವಪ್ನದಲ್ಲಿ ಹೇಳುತ್ತಿರುವಾಗ, ಶೇಷನೆಂಬವನು ಕಾಣಿಸಿಕೊಂಡರೆ ಅವನಿಗೂ ಬೋಧಿಸಿದರು. ಇತರರು ಕಾಣಿಸಿದರೆ ಅವರಿಗೂ ಬೋಧಿಸಿದರು. ಬಹುಭಕ್ತರು ಕಾಣಿಸಿದರೆ ಅವರಿಗೂ ಬೋಧಿಸಿದರು. ಹೀಗಾಗಿ ಈ ಗ್ರಂಥದಲ್ಲಿ ಅನೇಕ ಜನರ ಹೆಸರುಗಳು, ಅವರ ಪ್ರಕರಣಗಳು ಇವೆ. ಪ್ರಕರಣ ಭೇದದಿಂದಾಗಿ ಪುನರುಕ್ತಿಗಳಿವೆ. ವಿಪ್ರನೊಬ್ಬನೇ ಸತತ ಶ್ರೋತೃವು. ವಿಪ್ರನು ವೃನ್ದಾವನಾಚಾರ್ಯರ ಜನ್ಮ ಪಡೆದಾಗ, ಇತರರೂ ಜನ್ಮ ಪಡೆದರು. ಆಗ ಈ ಆಖ್ಯಾನದಲ್ಲಿ ಹೇಳಿರುವ ಘಟನೆಗಳು ಸೂಚಿತವಾದ ರೀತಿಯಲ್ಲಿ ನಡೆದವು. ಒಂದೊಂದು ದೇವರ ಸ್ತುತಿ ವಿಶೇಷಣಗಳಿಗೂ ಯಾವುದಾದರೂ ಒಂದು ಚಾರಿತ್ರಿಕ ಪ್ರಮೇಯವು ಮೂಲವಾಗಿರುತ್ತದೆ. ಆ ಚಾರಿತ್ರಿಕ ಘಟನೆಗಳು ಭವಿಷ್ಯತ್ ಸೂಚಕ ರೀತಿಯಲ್ಲಿ ನಿದರ್ಶನ ಪರ್ವದಲ್ಲಿ ಉಕ್ತವಾಗಿರುತ್ತದೆ. ಇದಕ್ಕೆ ಅವಶ್ಯಕವಾದ ದೇವರ ಸ್ತುತಿಯು ಭಜನಪರ್ವದಲ್ಲಿ ಹೇಳಲ್ಪಟ್ಟಿರುತ್ತದೆ. ಇಂತಹ ಘಟನೆಗಳನ್ನು ಪ್ರದರ್ಶಿಸುವ ಶ್ರೀವಾದಿರಾಜರ ಭಾಕ್ತ ಅಥವಾ ಭಾಗವತ ವೈಭವಗಳು ನಿದರ್ಶನ ಪರ್ವದಲ್ಲಿ ನಿರೂಪಿತವಾಗಿರುತ್ತವೆ. ಈ ರೀತಿಯಾಗಿ ಭಜನ ಪರ್ವದಲ್ಲಿರುವ ದೇವರ ಸ್ತುತಿಗಳಿಗೂ, ವ್ಯಭವ ಪರ್ವದಲ್ಲಿರುವ ಭೌಮ, ಭಾಗವತ, ಭಾಕ್ತ ಮತ್ತು ದಿವ್ಯಭಾಗವತ ಭಾಕ್ತ ವೈಭವಗಳಿಗೂ, ನಿದರ್ಶನ ಪರ್ವದಲ್ಲಿರುವ ಚಾರಿತ್ರಿಕ ಘಟನೆಗಳಿಗೂ ಸಂಬಂಧವಿರುತ್ತದೆ.

ಶ್ರೀವೃನ್ದಾವನಾಚಾರ್ಯರ ಜನ್ಮಚರಿತ್ರಯೇ ಈ ಗ್ರಂಥದ ಪ್ರಾಮಾಣ್ಯಕ್ಕೆ ಸಾಕ್ಷಿಯಾಗಿದೆ, ಆಗ ಆಖ್ಯಾನದಲ್ಲಿ ನುಡಿದ ನಿದರ್ಶನಗಳು ಪ್ರತ್ಯಕ್ಷವಾಗಿ ಕಂಡು ಬಂದಿವೆ. ಈ ಗ್ರಂಥದ ಮಹತ್ವಕ್ಕೂ ವೃನ್ದಾವನಾಚಾರ್ಯರ ಜನ್ಮ ಚರಿತ್ರೆಯೇ ಒಂದು ಅದ್ಭುತ ಸಾಕ್ಷಿಯಾಗಿದೆ.

ಆದರೆ ಸ್ವಾಪ್ನವೃನ್ದಾವನಾಖ್ಯಾನ ಗ್ರಂಥದ ಪ್ರಾಮಾಣ್ಯವನ್ನು ಕೆಲವರು ಶಂಕಿಸುವರು. ಆದ್ದರಿಂದ ಅವರ ವಿಮರ್ಶೆ ಸ್ವಲ್ಪಮಟ್ಟಿಗೆ ಇಲ್ಲಿ ಅಗತ್ಯವಾಗಿದೆ. ಅವರು (1) ಈ ಗ್ರಂಥವು ಸ್ವಾಪ್ನ ಗ್ರಂಥವಲ್ಲ. ಏಡಮೂಕನ ದ್ವಾರಾ ಇಂತಹ ಕಾರ್ಯ ಅಸಂಭವ. ಉದ್ದೇಶಪೂರ್ವಕವಾಗಿಯೇ ಜಾಗೃತ ಕಾಲದಲ್ಲಿಯೇ ರಚಿತವಾದುದು ಎಂದೂ (2) ಸ್ಟಾಪ್ನಗ್ರಂಥವಾದರೂ ಸ್ವಪ್ನಪದಗಳಿಗೆ ಪ್ರಾಮಾಣ್ಯವಿಲ್ಲವಾದುದರಿಂದ, ಈ ಗ್ರಂಥಕ್ಕೆ ಪ್ರಾಮಾಣ್ಯವಿಲ್ಲವೆಂದೂ (3) ಇದು ವಿಪ್ರನಿಂದ ವೃನ್ದಾವನಾಚಾರ್ಯರಿಂದ ರಚಿತವಾದ ಗ್ರಂಥವೆಂದೂ (4) ಗ್ರಂಥದ ಕೆಲವು ಭಾಗಗಳು ಶ್ರೀವಾದಿರಾಜರಿಂದಲೂ, ಕೆಲವು ಭಾಗಗಳು ವಿಪ್ರನಿಂದಲೂ ರಚಿತವಾದುದೆಂದೂ (5) ಈ ಕೃತಿಯಲ್ಲಿ ವಿಶ್ವಾಸ ಮಾಡದವರು ಶ್ವಾನಜನ್ಮಾದಿಗಳನ್ನು ಪಡೆಯುವರೆಂದು ಉಕ್ತವಾಗಿರುವುದರಿಂದ, ಈ ಗ್ರಂಥವು ಕೀಳುಮಟ್ಟದ ಗ್ರಂಥವಾಗಿ, ವಾದಿರಾಜರಂತಹವರಿಂದ ರಚಿತವಾಗಿರಲು ಸಾಧ್ಯವಿಲ್ಲವೆಂದೂ ಶಂಕೆಯನ್ನು ವ್ಯಕ್ತಪಡಿಸುತ್ತಾರೆ.

ಮೇಲಿನ ಎಲ್ಲಾ ಶಂಕಾದಿಗಳು ನಿರಾಧಾರವಾದವುಗಳು. ಅವುಗಳಿಗೆ ವಿರುದ್ಧವಾಗಿ ಆಧಾರಗಳಿವೆ. ಮೊದಲು ಈ ಗ್ರಂಥವು ಹೇಗೆ ರಚಿತವಾಯಿತೆನ್ನುವುದನ್ನು ನೋಡೋಣ. ಶತಮಾನಗಳ ಹಿಂದೆ, ಸುಮಾರು ಕ್ರಿ.ಶ. 1645ರಲ್ಲಿ ಶ್ರೀವೇದನಿಧಿ ತೀರ್ಥರ ಶಿಷ್ಯರಾದ ಶ್ರೀ ರಾಮಚಂದ್ರಾಚಾರ್ಯರಿಂದ ಬರೆಯಲ್ಪಟ್ಟಶ್ರೀವಾದಿರಾಜ ಗುರುವರ ಚರಿತಾಮೃತಂಎನ್ನುವ ಗ್ರಂಥದಲ್ಲಿ ಸ್ವಾಪ್ನವೃನ್ದಾವನಾಖ್ಯಾನ ಗ್ರಂಥದ ಹುಟ್ಟಿನ ಬಗ್ಗೆ ಉಲ್ಲೇಖನವಿದೆ. ಆ ಗ್ರಂಥದ ಏಳನೇ ಬಿಂದು ಹದಿನೇಳನೆಯ ಶ್ಲೋಕದಿಂದ ಇಪ್ಪತ್ತನೆಯ ಶ್ಲೋಕ ಪರ್ಯಂತವಾಗಿ ಈ ವಿಷಯವು ವರ್ಣಿತವಾಗಿದೆ.ಏಡಮೂಕಂ ದ್ವಿಜಂ ಸ್ವಪ್ನೇ ಬೋಧಯನ್ನಾತ್ಮವೃತ್ತಕಂ | ಶ್ರೀಮದ್ ವೃನ್ದಾವನಾಖ್ಯಾನಂ ಪಠತಾಂ ಸರ್ವಸಿದ್ಧಿದಮ್ 17 ತೋಷಯನ್ ಸಜ್ಜನಮನಃ ಸ್ವಮಾಹಾತ್ಮ್ಯಾವಬೋಧಕಮ್ | ಮಂತ್ರತುಲ್ಯಂ ಮಹಾಗ್ರಂಥಂ ರಚಯಾಮಾಸ ವಾದಿರಾಟ್ 18 ಪ್ರಾತಸ್ತದ್ವದನಾಚ್ಚಿತ್ರಂ ನಿಸ್ಸೃತಂ ಗುರುಣಾ ಮಮ | ಶ್ರೀವೇದನಿಧಿರಾಕರ್ಣ್ಯ ಲೇಖಯಾಮಾಸ ಮತ್ಕರಾತ್ 19 ಸ್ವಪ್ನಜಾತಂ ಗುರುಪೂಕ್ತ0 ಪ್ರಭಾತೇ ಕೀರ್ತಯನ್‌ ಜಡಃ| ತತಃ ಪರಂ ಮೂಕ ಏವ ಸಾಕ್ಷೀ ಚಾಹಂ ಚ ಮೇ ಗುರುಃ 20 ಈ ಶ್ಲೋಕಗಳ ತಾತ್ಪರ್ಯ:- ಕಿವುಡ ಮತ್ತು ಮೂಕನಾದ ವಿಪ್ರನಿಗೆ ತನ್ನ ಆತ್ಮವೃತ್ತಾಂತವನ್ನು ಸ್ವಪ್ನದಲ್ಲಿ ಬೋಧಿಸುತ್ತಾ, ಸಜ್ಜನರ ಮನಸ್ಸನ್ನು ಸಂತೋಷಪಡಿಸುತ್ತಾ, ತನ್ನ ಮಾಹಾತ್ಮ್ಯೆಯನ್ನು ತಿಳಿಸುವ ಪಠಿಸುವವರಿಗೆ ಸರ್ವಸಿದ್ಧಿಯನ್ನು ಕೊಡುವ, ಶ್ರೀಮದ್ ವೃನ್ದಾವನಾಖ್ಯಾನವೆಂಬ ಮಂತ್ರತುಲ್ಯ ಮಹಾಗ್ರಂಥವನ್ನು ಶ್ರೀವಾದಿರಾಜರು ರಚಿಸಿದರು. ಸ್ವಪ್ನದಲ್ಲಿ ಕಂಡು ಕೇಳಿದ ರೀತಿಯಲ್ಲಿಯೇ ಪ್ರಾತಃ ಕಾಲದಲ್ಲಿ ಆ ವಿಪ್ರನ ಮುಖದಿಂದ ಆಶ್ಚರ್ಯಕರವಾಗಿ ಬರುತ್ತಿದ್ದ ಆ ಶ್ಲೋಕಗಳನ್ನು ನನ್ನ ಗುರುಗಳಾದ ವೇದನಿಧಿಗಳು ಕೇಳಿ, ನನ್ನಿಂದ ಬರೆಯಿಸಿದರು. ಗುರುಗಳಿಂದ ಹೇಳಲ್ಪಟ್ಟು ಸ್ವಪ್ನದಲ್ಲಿ ಕಂಡದ್ದನ್ನು ಪ್ರಾತಃ ಕಾಲದಲ್ಲಿ ಹೇಳಿದನಂತರ ಮೂಕನೇ ಆಗುತ್ತಿದ್ದನು. ಇದಕ್ಕೆ ನಾನು ಮತ್ತು ನನ್ನ ಗುರುಗಳೇ ಸಾಕ್ಷಿ. ಹೀಗೆ ಉಕ್ತವಾಗಿರುವುದರಿಂದ ಈ ಗ್ರಂಥದ ಉತ್ಪತ್ತಿಯು ಯಾವ ರೀತಿಯಲ್ಲಿ ಆಗಿದೆ ಎಂದು ತಿಳಿಯುತ್ತದೆ. ಹಾಗೂ ಇದಕ್ಕೆ ಪ್ರತ್ಯಕ್ಷ ಸಾಕ್ಷಿಗಳು ಇದ್ದಾರೆನ್ನುವುದೂ ತಿಳಿಯುತ್ತದೆ. ಗುರುಗಳಾದ ವೇದನಿಧಿಗಳು ಈ ಗ್ರಂಥದ ಹದಿನೈದು ಶ್ಲೋಕಗಳನ್ನು ಆರಿಸಿ, ತಮ್ಮ ಮೂರು ಶ್ಲೋಕಗಳನ್ನು ಸೇರಿಸಿ, ಅಣುವೃನ್ದಾವನಾಖ್ಯಾನವೆಂಬ ಕೃತಿಯನ್ನು ಶಿಲೆಯಲ್ಲಿ ಕೆತ್ತಿಸಿ ಸ್ಥಾಪಿಸಿದ ವಿಷಯವು ಇಪ್ಪತ್ತೆರಡನೆಯ ಶ್ಲೋಕದಿಂದ ತಿಳಿಯುತ್ತದೆ.

ಸೋದಾಕ್ಷೇತ್ರದಲ್ಲಿ ಪ್ರತಿದಿನವೂ ಪೂಜೆಗೊಳ್ಳುತ್ತಿರುವ ಈ ಶಿಲೆಯನ್ನು ಇಂದಿಗೂ ನೋಡಬಹುದು. ಆದ್ದರಿಂದ ಈ ವೃನ್ದಾವನಾಖ್ಯಾನ ಗ್ರಂಥವು ಸ್ವಾಪ್ನಗ್ರಂಥವೆಂದು ಪ್ರತ್ಯಕ್ಷಸಿದ್ಧವಾಯಿತು. ವಾದಿರಾಜರೇ ಕರ್ತೃಗಳೆನ್ನುವುದಕ್ಕೆ ಈ ಗ್ರಂಥವೇ ಸಾಕ್ಷಿಯಾಗಿದೆ. ಇದರಿಂದ ಸ್ವಾಪ್ನಗ್ರಂಥವಲ್ಲ ಎಂಬ ಮೊದಲನೆ ಶಂಕೆಯ ಒಂದು ಭಾಗವೂ, ವಿಪ್ರಕೃತ (ವೃನ್ದಾವನಾಚಾರ್ಯ ಕೃತ) ಎಂಬ ಮೂರನೆಯ ಶಂಕೆಯೂ, ಗ್ರಂಥದ ಕೆಲವು ಭಾಗ ವಾದಿರಾಜರಿಂದಲೂ, ಕೆಲವು ಭಾಗ ವಿಪ್ರನಿಂದಲೂ ಕೃತವಾದುದೆಂಬ ನಾಲ್ಕನೆಯ ಶಂಕೆಯೂ, ಇಂತಹ ಗ್ರಂಥ ವಾದಿರಾಜರಂತಹವರಿಂದ ರಚಿತವಾಗಿರಲು ಸಾಧ್ಯವಿಲ್ಲವೆಂಬ ಐದನೆಯ ಶಂಕೆಯ ಒಂದು ಭಾಗವೂ ಬಿದ್ದು ಹೋಗುತ್ತವೆ. ದೇವತೆಗಳ ಅಸಾಧಾರಣ ಸಾಮರ್ಥ್ಯವನ್ನು ತಿಳಿಯದವರು, ಕಿವುಡ ಮೂಕನ ದ್ವಾರಾ ಇಂತಹ ಕೃತಿ ಅಸಂಭವವೆಂದು ಹೇಳಬೇಕಷ್ಟೇ. ಉದ್ದೇಶಪೂರ್ವಕವಾಗಿ ಸ್ಪಷ್ಟವಾದ ಗ್ರಂಥವೆಂದು ಹೇಳುವವರು, ಯಾವ ಉದ್ದೇಶದಿಂದ? ಯಾವಾಗ? ಯಾರಿಂದ ರಚಿತವಾಗಿದೆ. ಅದಕ್ಕೆ ಸಾಕ್ಷಿ ಏನು? ಎನ್ನುವುದನ್ನು ತಿಳಿಸಿ, ತಮ್ಮವಾದವನ್ನು ಸಮರ್ಥಿಸಬೇಕು. ಹಾಗೆ ಮಾಡದಿರುವುದರಿಂದ ಮೊದಲನೆ ಶಂಕೆಯ ಇತರ ಭಾಗಗಳೂ ನಿರಾಧಾರವಾದವುಗಳಾದವು. ಮೂರನೇ ಶಂಕೆಯಲ್ಲಿ ವಿಪ್ರನೆಂದರೆ ಏಡಮೂಕ ವಿಪ್ರನೇ? ಅಥವಾ ಜನ್ಮಾಂತರದಲ್ಲಿನ ವೃನ್ದಾವನಾಚಾರ್ಯರೇ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಏಡಮೂಕ ವಿಪ್ರನೇ ಎಂದರೆ ರಚನಾಕೌಶಲ್ಯರಹಿತನಾದ್ದರಿಂದ ಅದು ಸಾಧ್ಯವಿಲ್ಲ. ವೃನ್ದಾವನಾಚಾರ್ಯರೆಂದರೆ, ಅವರ ಜನ್ಮಕ್ಕಿಂತ ಸುಮಾರು 150-200 ವರ್ಷಗಳ ಮುಂಚೆಯೇ ರಚಿತವಾಗಿರುವುದಕ್ಕೆ ಪ್ರಮಾಣವಿರುವುದರಿಂದ ಅದೂ ಸಾಧ್ಯವಿಲ್ಲ. ಇದೇ ಕಾರಣದಿಂದ ನಾಲ್ಕನೆಯ ಶಂಕೆಯೂ ಬಿದ್ದು ಹೋಗುತ್ತದೆ. ಇನ್ನು ಸ್ಪಷ್ನಪದಗಳಿಗೆ ಪ್ರಾಮಾಣ್ಯವಿಲ್ಲವೆನ್ನುವುದು ಎರಡನ ಶಂಕೆ. ಬ್ರಹ್ಮಸೂತ್ರ ಭಾಷ್ಯ 3-2-4 ರಲ್ಲಿ ಯದ್ವಾಪಿ ಬ್ರಾಹ್ಮಣೋ ಭ್ರೂಯಾದ್ದೇವತಾ ವೃಷಭೋಪಿ ವಾ ಸ್ವಪ್ನಸ್ಥಮಥವಾ ರಾಜಾ ತತ್ತಥೈವ ಭವಿಷ್ಯತಿ ಇತ್ಯಾ(ದ್ಯಾ)ಚಕ್ಷತೇ ಸ್ವಪ್ನವಿದೋ ವ್ಯಾಸಾದಯಃಎಂದು ಹೇಳಿರುವುದರಿಂದ, ಸ್ವಪ್ನದಲ್ಲಿ ದೇವತೆಗಳು ಬ್ರಾಹ್ಮಣಾದಿಗಳು ಹೇಳಿದ್ದು ಸತ್ಯವಾಗುತ್ತದೆಂದಾಯಿತು. ಆದ್ದರಿಂದ ಸ್ವಪ್ನಪದಗಳಿಗೆ ಪ್ರಾಮಾಣ್ಯವಿಲ್ಲವೆನ್ನುವುದು ಬ್ರಹ್ಮಸೂತ್ರ ಭಾಷ್ಯೋಕ್ತಿಗೆ ವಿರುದ್ಧವಾಗಿ ಶಂಕೆಯು ಬಿದ್ದು ಹೋಗುತ್ತದೆ. ಈ ಗ್ರಂಥದಲ್ಲಿ ಉಕ್ತವಾದ ವಿಷಯಗಳು ಶ್ರೀಮದಾಚಾರ್ಯರಿಂದ ಪ್ರಮಾಣಗ್ರಂಥಗಳೆಂದು ಅಂಗೀಕೃತವಾದ ಗ್ರಂಥಗಳಿಗೆ ಅನುಸಾರಿಯಾಗಿಯೂ, ಅವಿರೋಧವಾಗಿಯೂ ಇರುವುದರಿಂದ ಪ್ರಮಾಣವಾಗಿಯೇ ಇದೆ. ಹಾಗೆಯೇ ಪ್ರಮಾಣಗ್ರಂಥಗಳೆಂದು ಪ್ರಸಿದ್ಧವಾದ ವೇದ ಪುರಾಣಾದಿ ಗ್ರಂಥಗಳಲ್ಲಿ (ಉಕ್ತವಾದ ವಿಷಯಗಳಲ್ಲಿ) ವಿಶ್ವಾಸವಿಲ್ಲದವರಿಗೆ ನರಕಾದಿ ಅನರ್ಥಗಳೂ, ಮಲದ ಕ್ರಿಮಿ ಮುಂತಾದ ಹೀನ ಜನ್ಮಗಳ ಪ್ರಾಪ್ತಿ ಮೊದಲಾದವುಗಳೂ ಉಕ್ತವಾಗಿರುವಂತೆ ವೇದತುಲ್ಯವಾದ ಈ ಗ್ರಂಥದಲ್ಲೂ ವಿಶ್ವಾಸರಹಿತರಿಗೆ ಶ್ವಾನಜನ್ಮಾದಿಗಳು ಉಕ್ತವಾಗಿರುವುದು. ಇದರಿಂದಾಗಿ ಐದನೇ ಶಂಕೆಯಲ್ಲಿ ಹೇಳಿರುವಂತೆ ಕೀಳು ಮಟ್ಟದ ಗ್ರಂಥವೆಂದು ಹೇಳಲಿಕ್ಕೆ ಸಾಧ್ಯವಿಲ್ಲ. ಈ ಶಂಕೆಯು ಗ್ರಂಥಲಕ್ಷಣ ತಿಳಿಯದವರ ಮಾತಾಗಿದೆ. ಈ ರೀತಿಯಾಗಿ ಐದು ಬಗೆಯ ಎಲ್ಲಾ ಶಂಕೆಗಳೂ ನಿರಾಧಾರವಾದವುಗಳೆಂದು ತೋರಿಸಲ್ಪಟ್ಟವು.

ಮೇಲೆ ಹೇಳಿದ ಶಂಕೆಗಳೇ ಈ ಗ್ರಂಥದ ಪ್ರಾಮಾಣ್ಯವನ್ನು ಸಮರ್ಥಿಸುತ್ತವೆ. ಅದು ಹೇಗೆಂಬುದನ್ನು ಇನ್ನು ಮುಂದೆ ನೋಡೋಣ, ಪ್ರಮಾಣ ಗ್ರಂಥವಾದ ಬ್ರಹ್ಮಸೂತ್ರ ಭಾಷ್ಯದಲ್ಲಿ ಹೇಳಿರುವಂತೆ, ಭವಿಷ್ಯವನ್ನು ತಿಳಿಸುವ ಸ್ವಪ್ನಪದಗಳು ಬ್ರಾಹ್ಮಣ ದೇವತಾದಿಗಳಿಂದ ಹೇಳಲ್ಪಟ್ಟಾಗ ಅವು ಸತ್ಯವಾಗುತ್ತದೆ. ಈ ಗ್ರಂಥವು ಶ್ರೀವಾದಿರಾಜರಿಂದ ಸ್ವಪ್ನದಲ್ಲಿ ವಿಪ್ರನಿಗೆ ಹೇಳುವ ದ್ವಾರಾ ರಚಿತವಾದುದರಿಂದ, ಈ ಗ್ರಂಥಕ್ಕೆ ಪ್ರಾಮಾಣ್ಯ ಬರಲು (1) ಗ್ರಂಥ ಕರ್ತೃಗಳಾದ ಶ್ರೀ ವಾದಿರಾಜರು ಬ್ರಾಹ್ಮಣರು ಅಥವಾ ದೇವತೆಯಾಗಿರಬೇಕು. (2) ಸ್ಪಪ್ನಪದಗಳು ಭವಿಷ್ಯದಲ್ಲಿ ಆಗುವುದನ್ನು ತಿಳಿಸುವುದರಿಂದ, ಭವಿಷ್ಯದಲ್ಲಿ ಗ್ರಂಥದ ಪ್ರಾಮಾಣ್ಯವು ಶಂಕಿಸಲ್ಪಟ್ಟಿರುವುದರಿಂದ, ಹಿಂದೆಯೇ ರಚಿತವಾದ ಈ ಗ್ರಂಥದಲ್ಲಿ ಆ ಶಂಕಗಳು ಶಂಕಾರೂಪದಲ್ಲಿಯಾಗಲೀ ಅಥವಾ ಆ ಶಂಕೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ಉತ್ತರರೂಪದಲ್ಲಿಯಾಗಲೀ ಅಥವಾ IX-50ರಲ್ಲಿಏಷ್ಯಶ್ಚ ನಿಶ್ಚಿತಂ ಸರ್ವಮತೀತತ್ವೇನ ಭಣ್ಯತೇಎಂದು ಹೇಳಿರುವಂತೆ, ನಡೆದು ಹೋಗಿರುವ ರೀತಿಯಲ್ಲಾಗಲೀ ಉಕ್ತವಾಗಿರಬೇಕು. ಹಾಗೆ ಈ ಸ್ವಾಪ್ನವೃನ್ದಾವನ ಗ್ರಂಥದಲ್ಲಿ ಈ ಶಂಕೆಗಳು ಉಕ್ತವಾಗಿದ್ದರೆ, ಶಂಕೆಗಳು ಭವಿಷ್ಯದಲ್ಲಿ ಸತ್ಯವಾಗುವುದರಿಂದ, ಗ್ರಂಥಕ್ಕೆ ಪ್ರಾಮಾಣ್ಯವು ಬರುತ್ತದೆ. ಈ ಆಧಾರಗಳ ಮೇಲೆ ಗ್ರಂಥ ಪರಿಶೀಲನೆ ಮಾಡೋಣ.

ಒಂದನೇ ಅಧ್ಯಾಯ 57-58ನೇ ಶ್ಲೋಕಗಳಲ್ಲಿವಾದಿರಾಜಾಖ್ಯಯತಿನಾ ವಾಗೀಶಕರಜೇನ ಚ57 ವೃನ್ದಾವನಗತೇನೈವ ಬ್ರಾಹ್ಮಣಸ್ವಾಪ್ನಮೂರ್ತಿನಾ| ಕೃತಂ ಸ್ತೋತ್ರಮಿದಂ ಪುಣ್ಯಂ ಪಠತಾಂ ಸಂಪದಾಂ ಪದಂ58ವೃನ್ದಾವನವನ್ನು ಪ್ರವೇಶಿಸಿರುವ, ವಿಪ್ರನಿಗೆ ಕಾಣಿಸಿಕೊಂಡ ರೂಪದಿಂದ ವಾಗೀಶ ಮುನಿಗಳ ಕರಸಂಜಾತ ವಾದಿರಾಜಯತಿಯಿಂದ ರಚಿಸಲ್ಪಟ್ಟಿರುವ ಈ ಪುಣ್ಯತಮವಾದ ಸ್ತೋತ್ರವು (ಆಖ್ಯಾನವು) ಪಠಿಸಿದವರಿಗೆ ಸಂಪತ್ತನ್ನು ಕೊಡುತ್ತದೆ. ಈ ಶ್ಲೋಕದಿಂದ ವೃನ್ದಾವನವನ್ನು ಪ್ರವೇಶಿಸಿದ ಅನಂತರ, ವಾಗೀಶತೀರ್ಥರಿಂದ ಸನ್ಯಾಸವನ್ನು ಪಡೆದ ವಾದಿರಾಜರು ಬ್ರಾಹ್ಮಣನ ಸ್ವಪ್ನದಲ್ಲಿ ಕಾಣಿಸಿಕೊಂಡು, ಅವನ ಮೂಲಕ ಈ ವೃನ್ದಾವನಾಖ್ಯಾನವನ್ನು ರಚಿಸಿದ್ಧಾರೆಂದು ತಿಳಿಯುತ್ತದೆ. ಶ್ರೀವಾದಿರಾಜರು ಜೀವೋತ್ತಮ ದೇವತೆಯಾದರೂ ಬ್ರಾಹ್ಮಣರೆಂಬ ವಿಷಯದಲ್ಲಿ ನಿರ್ವಿವಾದ. ಬ್ರಾಹ್ಮಣರಿಂದ ಸ್ವಪ್ನದಲ್ಲಿ ಹೇಳಿದ ಮಾತುಗಳು ಸತ್ಯವಾಗುವುದೆಂದು ಬ್ರಹ್ಮಸೂತ್ರ ಭಾಷ್ಯದಲ್ಲಿ ಹೇಳಿರುವುದರಿಂದ, ಈ ಆಖ್ಯಾನೋಕ್ತ ಸ್ವಾಪ್ನಪದಗಳಿಗೆ ಪ್ರಾಮಾಣ್ಯವಿದೆ ಎಂದು ಹೇಳಿದಂತಾಯಿತು. ಪ್ರಾಮಾಣ್ಯವಿದೆ ಎಂದು ಸಮರ್ಥಿತವಾದುದರಿಂದ ಎರಡನೆಯ ಶಂಕೆಯು ನಿರಸ್ತವಾಯಿತು. ವಾದಿರಾಜರು ಸ್ವಪ್ನದಲ್ಲಿ ವಿಪ್ರದ್ವಾರಾ ತಾನೇ ರಚಿಸಿರುವನೆಂದು ಹೇಳಿರುವುದರಿಂದಲೂ, ಅನ್ಯರಾರೂ ಈ ಗ್ರಂಥಕ್ಕೆ ತಮ್ಮ ಕರ್ತೃತ್ವವಿದೆಯೆಂದು ಹೇಳಿಲ್ಲವಾದ್ದರಿಂದಲೂ ಒಂದನೇ, ಮೂರನೇ, ನಾಲ್ಕನೇ ಮತ್ತು ಭಾಗಶಃ ಐದನೆಯ ಶಂಕೆಗಳು ನಿರಸ್ತವಾದುವು. ಅಷ್ಟು ಮಾತ್ರವಲ್ಲ, ಭವಿಷ್ಯದಲ್ಲಿ ಈ ಕೃತಿಯ ವಿಷಯದಲ್ಲಿ ಶಂಕೆಯನ್ನು ಮಾಡುವರು ಎನ್ನುವ ವಿಷಯ ಐದನೆಯ ಅಧ್ಯಾಯ 16ನೇ ಶ್ಲೋಕದಲ್ಲಿದೆ.ತಸ್ಮಾತ್ ವೃನ್ದಾವನಾಖ್ಯಾನಂ ಮಂದಾನಾಂ ಶಂಕಿತಂ ಮುನೇ | ಕಂದಾಶನೇಂದ್ರರಚಿತಂ ತಂ ದೋಷಂ ನ ದದಾತಿ ಚ ” (ಗೂಢಾರ್ಥವುಳ್ಳ) ಕಾರಣದಿಂದ ವೃನ್ದಾವನಾಖ್ಯಾನದಲ್ಲಿ (ಅಲ್ಪಪುಣ್ಯವಂತರಾದ) ಅಜ್ಞಭಕ್ತರಿಗೆ (ಅಥವಾ ಪುಣ್ಯಹೀನರಾದ ಅಸುರ ಮಂದಮತಿಗಳಿಗೆ) ಶಂಕೆ ಮಾಡಲು ಅವಕಾಶವಾಯಿತು. ವಾದಿರಾಜ ಮುನಿಶ್ರೇಷ್ಠರಿಂದ ರಚಿತವಾದ ವೃನ್ದಾವನಾಖ್ಯಾನವು ದೋಷವನ್ನು ಪ್ರದರ್ಶಿಸುವುದಿಲ್ಲವೆಂದು ಈ ಶ್ಲೋಕದಲ್ಲಿ ಹೇಳಿದ್ದಾರೆ. ಈ ಭವಿಷ್ಯ ವಚನವು ಸತ್ಯವಾಗಿದೆ. 17ನೇ ಅಧ್ಯಾಯ 72ರಿಂದ 74ನೇ ಶ್ಲೋಕಗಳಲ್ಲಿಏಕೋ ವದತಿ ವಿಪ್ರಸ್ಯ ಕೃತಿರೇವೇತಿ ಸರ್ವಥಾ 72 ಪುನರೇಕೋ ವದತ್ಯೇವ ಲೌಕಿಕಂ ಬ್ರಾಹ್ಮಣೋದಿತಂ| ಅಲೌಕಿಕೋಕ್ತಿಮಾತ್ರಂ ತು ಗುರುಣೈವೋದಿತಂ ಹಿ ತತ್ 73 1/2 ”  ಸರ್ವಥಾ ಈ ಕೃತಿಯು ವಿಪ್ರನದೇ ಎಂದು ಒಬ್ಬನು ಹೇಳುತ್ತಾನೆ. ಮತ್ತೂಬ್ಬನು ಲೌಕಿಕ ಭಾಗವು ವಿಪ್ರನಿಂದಲೂ, ಅಲೌಕಿಕ ಭಾಗ ಮಾತ್ರ ಗುರುಗಳಿಂದಲೂ ಹೇಳಲ್ಪಟ್ಟಿದೆ ಎಂದು ಹೇಳುತ್ತಾನೆಎಂದು ಈ ಶ್ಲೋಕಗಳಲ್ಲಿ ಹೇಳಿದೆ. ಮೂರು ಮತ್ತು ನಾಲ್ಕನೆಯ ಶಂಕೆಗಳು ಇವೇ ಆಗಿವೆ. ಆದ್ದರಿಂದ ಈ ಭವಿಷ್ಯ ನುಡಿಯು ಸತ್ಯವೇ ಆಗಿದೆ. XVI 92-93ನೇ ಶ್ಲೋಕಗಳಲ್ಲಿಈ ಮೂಕನು ಇಂತಹ ಅದ್ಭುತ ಶ್ಲೋಕಗಳನ್ನು ಬೆಳಿಗ್ಗೆ ಎದ್ದು ಹೇಳುತ್ತಾನೆಂದರೆ, ಅದು ಅಸಂಭಾವಿತವು ಎನ್ನುವ ಜನರ (ಮೊದಲನೆ ಭಾಗಶಃ) ಶಂಕೆಗೆ ಉತ್ತರರೂಪವಾಗಿಅಕುಶಲನಾದ ವಿಪ್ರನಿಗೆ ತನ್ನ ಕರಸ್ಪರ್ಶದಿಂದ ಬಹುಗ್ರಂಥಧಾರಣ ವಚನ ಸಾಮರ್ಥ್ಯಗಳು ಉಂಟಾಗುತ್ತವೆಎಂದು ಹೇಳಿದ್ದಾರೆ,I– 112ರಲ್ಲಿಶ್ರೀಹಯಗ್ರೀವ ದೇವರ ಪಾರ್ಷದ ಪುರುಷನಾಮಕನಿಂದ ರಚಿಸಲ್ಪಟ್ಟು, ಪುರುಷಸೂಕ್ತ (ವೇದ) ತುಲ್ಯವಾದ ಈ ವೃನ್ದಾವನಾಖ್ಯಾನಸಂಹಿತೆಯು ಶ್ರೀಹಯಗ್ರೀವ ದೇವರಿಗೇನೇ ಅರ್ಪಿತವಾಗಲಿಎಂದು ಹೇಳಿರುವುದರಿಂದ ಈ ಗ್ರಂಥವು ವೇದತುಲ್ಯವೆಂದಾಗಿ ಐದನೆಯ ಆಕ್ಷೇಪವಾದ ಕೀಳುಮಟ್ಟದ ಗ್ರಂಥವೆಂಬ ಶಂಕೆಯನ್ನು ಉತ್ತರರೂಪದಿಂದ ಭವಿಷ್ಯತ್ ಸೂಚಕ ರೀತಿಯಲ್ಲಿ ತಿಳಿಸಿ, ಶಂಕೆಯನ್ನು ನಿರ್ಮೂಲಗೊಳಿಸಿದಂತಾಯಿತು. ಈ ರೀತಿಯಾಗಿ ಎಲ್ಲಾ ಶಂಕೆಗಳು ಗ್ರಂಥದಲ್ಲಿ ನಿರೂಪಿತವಾಗಿದ್ದು ಭವಿಷ್ಯದಲ್ಲಿ ಸತ್ಯವಾದ ಪ್ರಯುಕ್ತ, ಆಖ್ಯಾನವು ಪ್ರಮಾಣವಾದುದೆಂದು, ಈ ಶಂಕೆಗಳಿಂದಲೇ ಸಮರ್ಥನೆ ಮಾಡಿದಂತಾಯಿತು. ಆಖ್ಯಾನದ ಪ್ರಾಮಾಣ್ಯವನ್ನು ತಿಳಿಸುವ ಅನೇಕ ಶ್ಲೋಕಗಳು ಗ್ರಂಥದಲ್ಲಿದ್ದರೂ, ಕೆಲವನ್ನು ಮಾತ್ರ ಇಲ್ಲಿ ಉದಾಹರಿಸಲಾಗಿದೆ.

VI-32ರಲ್ಲಿಸರ್ವತ್ರ ತವ ವಿಶ್ವಾಸಃ ಹ್ಯವಿಶ್ವಾಸಃ ಕುತೋತ್ರತು” (ಪ್ರಮಾಣ ಗ್ರಂಥಗಳಾದ ವೇದಾದಿ) ಸರ್ವಗ್ರಂಥಗಳಲ್ಲಿ ವಿಶ್ವಾಸ ಮಾಡುವವನಿಗೆ (ವೇದತುಲ್ಯವಾದ) ಈ ಗ್ರಂಥದ ವಿಷಯದಲ್ಲಿ ಅವಿಶ್ವಾಸವು ಹೇಗೆ ಉಂಟಾಗುತ್ತದೆ? ಎಂದಿದ್ದಾರೆ. ಈ ಶ್ಲೋಕದ ಅಭಿಪ್ರಾಯವನ್ನು ಸ್ವಲ್ಪಮಟ್ಟಿಗೆ ವಿಮರ್ಶಿಸುವುದು ಅಗತ್ಯವಾಗಿದೆ. ಬಾಧಕವಿಲ್ಲದಿರುವಾಗ ವಾಕ್ಯಗಳಿಗೆ ಸ್ವತಃ ಪ್ರಾಮಾಣ್ಯವಿದೆ. ವೇದವಾಕ್ಯಗಳಿಗೆ ಬಾಧಕವಿಲ್ಲ. ಅಪೌರುಷೇಯತ್ವಾದಿ ಶಂಕಾ ಪರಿಹಾರಕ ಯುಕ್ತಿಗಳಿವೆ. ಭಾರತದಲ್ಲಿ ವೇದಪರಿಗೃಹೀತತ್ವ, ಆಪ್ತಿ ಮೂಲತ್ವಾದಿಗಳಿವೆ. ಆದ್ದರಿಂದ ಅವುಗಳಲ್ಲಿ ವಿಶ್ವಾಸವಿದೆ ಎಂದು ಪ್ರಾಮಾಣ್ಯ ನಿಶ್ಚಯ ಮಾಡುವವರು, ಈ ಗ್ರಂಥಕ್ಕೂ ಆಪ್ತಿಮೂಲತ್ವ, ವೇದವೇದ್ಯರು, ವಿಜಯದಾಸರು, ಜಗನ್ನಾಥದಾಸರು ಇವರುಗಳೇ ಮೊದಲಾದ ಅಪರೋಕ್ಷಜ್ಞಾನಿಗಳಿಂದ ಪರಿಗೃಹೀತತ್ವ, ಹಾಗೂ ಪ್ರಮಾಣಗ್ರಂಥಗಳ ಅನುಸಾರಿತ್ವ, ಅವಿರೋಧತ್ವಿವಿರುವ ಮೂಲಕ ಸ್ವತಃ ಪ್ರಾಮಾಣ್ಯವು ಇದೆ ಎಂದು ತಿಳಿಯಬೇಕು. ಇನ್ನು ಶ್ರೀರಾಘವೇಂದ್ರ ಸ್ವಾಮಿಗಳೇ ಮೊದಲಾದ ಕೆಲವು ಜ್ಞಾನಿಗಳಿಂದ, ಈ ಗ್ರಂಥವು ಪ್ರಮಾಣತ್ವೇನ ಉದಾಹೃತವಾಗಿಲ್ಲವೆಂದು ಹೇಳುವುದಾದರೆ, ವೇದವೂ ಕೂಡ ಆಂಗಿರಸ ಮೊದಲಾದ ಋಷಿಗಳಿಂದ ಪ್ರಮಾಣವೆಂದು ಹೇಳಲ್ಪಟ್ಟಿಲ್ಲ. ಅವರು ಹೇಳದಿರುವುದರಿಂದಲೇ ವೇದವು ಆಪ್ರಮಾಣವಾಗಲಿಲ್ಲ. ಅನುಕ್ತಿಯಿಂದ ದೋಷವನ್ನು ಹೇಳಿದಂತಾಗಲಿಲ್ಲ. ವೃನ್ದಾವನಾಖ್ಯಾನ ಗ್ರಂಥವು ಅಪ್ರಮಾಣವೆಂದು ಶ್ರೀರಾಘವೇಂದ್ರ ಸ್ವಾಮಿಗಳು ಹೇಳಲಿಲ್ಲ.ಅಪ್ರತಿಷಿದ್ಧಂ ಅನುಮತಂಎನ್ನುವ ನ್ಯಾಯೋಕ್ತಿಯಂತೆ ಅವರಿಗೆ ಸಮ್ಮತವಾದುದೇ ಎಂದು ನಿಶ್ಚಯವಾಗುತ್ತದೆ.

ವೇದಗಳೂ ಹಾಗೆಯೇ ಭಾರತಾದಿ ಗ್ರಂಥಗಳಿಗೆ ಪ್ರಾಮಾಣ್ಯವಿದ್ದರೂ, ಅನೇಕ ಭಾಷ್ಯಕಾರರು ಬೇರೆ ಬೇರೆ ವ್ಯಾಖ್ಯಾನಗಳನ್ನು ಬರೆದು, ಪ್ರಮೇಯಗಳನ್ನು ವಿರುದ್ಧ ರೀತಿಯಲ್ಲಿ ಹೇಳಿ ಪ್ರತಿಪಾದಿಸಿದ್ದಾರೆ. ಹಾಗೆಯೇ ವೇದಾರ್ಥಕ್ಕೆ ವಿರುದ್ಧವಾದ ಅರ್ಥವುಳ್ಳ ಗ್ರಂಥಗಳು ದೇವತೆಗಳಿಂದಲೇ ರಚಿತವಾಗಿವೆ. ಬೃಹಸ್ಪತ್ಯಾಚಾರ್ಯರು ವೇದವಿರುದ್ಧ ಚಾರ್ವಾಕಮತ ಪ್ರವರ್ತಕರು, ರುದ್ರದೇವರು ಪಾಶುಪತಗ್ರಂಥ ಕರ್ತರು, ಬೌದ್ಧಮತಕ್ಕೆ ಬುದ್ಧ ದೇವರೂ, ಜೈನ ಮತಕ್ಕೆ ವೃಷಭ ದೇವರೂ, ನ್ಯಾಯ ವೈಶೇಷಿಕ ಮತಕ್ಕೆ ಗೌತಮ ಕಣಾದರೂ ಪ್ರವರ್ತಕರು. ಆದ್ದರಿಂದ ವೇದಾದಿ ಪ್ರಮಾಣ ಗ್ರಂಥಗಳ ಯಥಾರ್ಥವಾದ ಅರ್ಥವನ್ನು ತಿಳಿಯಲು ಅಶಕ್ತವಾಯಿತು. ಆಗ ವಾಯುದೇವರು ಶ್ರೀಮದಾಚಾರ್ಯರಾಗಿ ಅವತರಿಸಿ, ದೇವತೆಗಳಿಂದ ವೇದವಿರುದ್ಧ ಮತಗಳು ಪ್ರವರ್ತಿಸಲ್ಪಡಲು ಕಾರಣವೇನೆಂಬುದನ್ನು ತಿಳಿಸಿ, ಇತರ ಭಾಷ್ಯಕಾರರ ಮತದಲ್ಲಿನ ದೋಷಗಳನ್ನು ತೋರಿಸಿ, ಪ್ರತ್ಯಕ್ಷ ಅನುಮಾನ ಆಗಮ ಪ್ರಮಾಣಗಳಿಂದಲೂ, ಉಪಕ್ರಮ ಉಪಸಂಹಾರ ಅಭ್ಯಾಸ ಅಪೂರ್ವತಾ ಫಲ ಅರ್ಥವಾದವೆಂಬ ಷಡ್ವಿಧ ಲಿಂಗಗಳಿಂದ ಯಥಾರ್ಥವಾದ ಅರ್ಥವನ್ನು ನಿಶ್ಚಯಿಸಿ ಪ್ರಮೇಯಗಳನ್ನು ನಿರೂಪಿಸಿರುತ್ತಾರೆ. ಆಖ್ಯಾನ ಗ್ರಂಥವು ಶ್ರೀಮದಾಚಾರ್ಯರಿಂದ ನಿರೂಪಿತವಾದ ವಿಷ್ಣು ಸರ್ವೋತ್ತಮತ್ವಾದಿಗಳನ್ನು ಪ್ರತಿಪಾದಿಸುತ್ತದೆಯೇ? ಮತ್ತು ಶ್ರೀಮಧ್ವಮತಾನುಸಾರಿಯಾಗಿದೆಯೇ ಎಂದು ತಿಳಿಯುವುದರ ಮೂಲಕ ಈ ಗ್ರಂಥದ ಪ್ರಾಮಾಣ್ಯವನ್ನು ಸುಲಭವಾಗಿ ನಿಶ್ಚಯಿಸಬಹುದು.

ಮಧ್ವಮತಾನುಸಾರಿಯಾದ ಪ್ರಮೇಯಗಳು ಮತ್ತು ವಿಷ್ಣು ಸರ್ವೋತ್ತಮತ್ವಾದಿಗಳನ್ನು ಪ್ರತಿಪಾದಿಸುವ ಅನೇಕ ಶ್ಲೋಕಗಳು ಈ ಗ್ರಂಥದಲ್ಲಿವೆ. IX-38-39ನೇ ಶ್ಲೋಕಗಳಲ್ಲಿತಸ್ಮಾದಾಚಾರ್ಯವರ್ಯೇಷು ಮತಾಚಾರ್ಯಾಃ ಸುರೋತ್ತಮಾಃ | ಆಚಾರ್ಯೇಷ್ವಪಿ ತೇಷ್ವತ್ರ ಮಧ್ವಾಚಾರ್ಯಃ ಪರೋ ಮತಃ ವೇದೇಷು ಸರ್ವೇಷು ಹರಿಃ ಸುರೋತ್ತಮಃ ಪೂರ್ವೇಷ್ವಥಾಚಾರ್ಯಮತೇಷು ತನ್ಮತಂ | ಗುರುಷ್ವಪೀಹ ಪ್ರವರೇಷು ಗೌರವಾತ್ ಪೂರ್ಣಪ್ರಜ್ಞಃ ಸರ್ವಶಾಸ್ತ್ರೇಷು ತದ್ವಾಕ್| ” (ಮಧ್ವಮತ ವ್ಯಾಖ್ಯಾನ ಕರ್ತೃಗಳಾದ ಟೀಕಾಚಾರ್ಯರೇ ಮೊದಲಾದ) ಮತಾಚಾರ್ಯರು ದೇವೋತ್ತಮರು. ಅವರಲ್ಲಿ ಮಧ್ವಾಚಾರ್ಯರು ಶ್ರೇಷ್ಠರು. ಸರ್ವವೇದಗಳಲ್ಲಿಯೂ ಶ್ರೀಹರಿಯೇ ಸರ್ವದೇವತೆಗಳಿಗಿಂತ ಉತ್ತಮನು, ಗೌರವ ದೃಷ್ಟಿಯಿಂದ ಶ್ರೇಷ್ಠರಾಗಿರುವ ಗುರುಗಳಲ್ಲಿ ಪೂರ್ಣಪ್ರಜ್ಞರೇ ಶ್ರೇಷ್ಠರು. ಸರ್ವಶಾಸ್ತ್ರಗಳಲ್ಲಿ ಅವರ ವಚನವೇ (ಸಿದ್ಧಾಂತವು) ಎಂದು ಪೂರ್ವಾಚಾರ್ಯರುಗಳಾದ (ಪದ್ಮನಾಭತೀರ್ಥರೇ ಮೊದಲಾದವರ) ಮತವುಎಂದು ಹೇಳಿದೆ. ಇದರಿಂದ ಈ ಗ್ರಂಥವು ಮಧ್ವಮತಾನುಸಾರಿಯಾದುದೆಂದು ಸ್ಪಷ್ಟವಾಗುತ್ತದೆ. ಪರವಾದಿಗಳನ್ನು ಜಯಿಸಲು ಮಾಧ್ವವಿದ್ವಾಂಸರು ಶರಣುಹೋಗುವ, ಶ್ರೀವಾದಿರಾಜರಿಂದ ಅವರ ಅವತಾರ ಕಾಲದಲ್ಲಿ ರಚಿತವಾದ ಯುಕ್ತಿಮಲ್ಲಿಕಾ ಗ್ರಂಥದ ವ್ಯಾಖ್ಯಾನವನ್ನು ರಚಿಸಲು, ಅವರ ಸಹೋದರರಾದ ಸುರೋತ್ತಮತೀರ್ಥರಿಗೆ ಕೊಟ್ಟ ಆದೇಶವು XI-67- 68ರಲ್ಲಿ ಸೂಚಿತವಾಗಿದೆ. ಇದೂ ಕೂಡ ಈ ಗ್ರಂಥವು ಮಧ್ವಮತಾನುಸಾರಿ ಎನ್ನುವುದಕ್ಕೆ ಸಹಕಾರಿಯಾಗಿದೆ. XXII – 8ನೇ ಶ್ಲೋಕದಲ್ಲಿ ಉಪಕ್ರಮ ಉಪಸಂಹಾರಾದಿ ಷಢ್ವಿಧ ಲಿಂಗಗಳಿಂದ ಈ ಗ್ರಂಥೋಕ್ತ ಶ್ಲೋಕಗಳ ತಾತ್ಪರ್ಯವನ್ನು ತಿಳಿಯಲು ಸಾಧ್ಯವೆನ್ನುವುದು ಸೂಚಿತವಾಗಿದೆ. ಇದು ವೇದತುಲ್ಯ ಗ್ರಂಥವೆನ್ನುವುದನ್ನು ಈ ಹಿಂದೆಯೇ ತಿಳಿಸಲಾಗಿದೆ. ಹೀಗೆ ವೇದಗಳಿಗೆ ಪ್ರಾಮಾಣ್ಯವಿರುವಂತೋ, ಈ ಗ್ರಂಥಕ್ಕೂ ಪ್ರಾಮಾಣ್ಯವಿದೆ. ಈ ಗ್ರಂಥವು ಮಧ್ವಸಿದ್ಧಾಂತಾನುಸಾರಿಯಾಗಿದೆ. ಆದ್ದರಿಂದ ಯಾವ ಕಾರಣದಿಂದಲೂ ಅಪ್ರಾಮಾಣ್ಯಶಂಕೆ ಮಾಡಲು ಶಕ್ಯವಿಲ್ಲವೆಂದು ತಿಳಿಯಬೇಕು.

ಮಧ್ವಗ್ರಂಥಗಳೇ ಇರುವಾಗ ಈ ಗ್ರಂಥದ ಆವಶ್ಯಕತೆ ಏನೆಂದು ಕೆಲವರು ಯೋಚಿಸಬಹುದು. ಪೂರ್ವದಲ್ಲಿ ವೇದೋಪನಿಷತ್ತುಗಳಿಂದಲೇ ಅಪರೋಕ್ಷವನ್ನು ಪಡೆಯುತ್ತಿದ್ದರು. ಗೌತಮರ ಶಾಪಾದಿಗಳಿಂದ ವೇದಾದಿಗತ ಶಕ್ತಿ ಕುಂಠಿತವಾಗಲು, ಶ್ರೀವೇದವ್ಯಾಸರ ಮೀಮಾಂಸಾಶಾಸ್ತ್ರಗಳಿಂದ ಅದು ನಿವಾರಿತವಾಯಿತು. ಅನಂತರ ಅದಕ್ಕೂ ಅಡಚಣೆಗಳು ಬರಲು, ಮಧ್ವಶಾಸ್ತ್ರದಿಂದ ನಿವಾರಿತವಾಯಿತು. ಅದರಂತೆಯೇ ಕಲಿಪ್ರಾಬಲ್ಯದಿಂದ ಸಜ್ಜನರ ಮನಸ್ಸು ಅಶುದ್ಧವಾಗಲು, ಆಖ್ಯಾನ, ವೃನ್ದಾವನಾದಿಗಳ ಸೇವೆಯಿಂದ ಅವು ನಾಶವಾಗುತ್ತಲಿವೆ. ಅದರಿಂದ ಆವಶ್ಯಕತೆ ಬಂದಿದೆ. ಹೀಗೆಯೇ ಮುಂದೆ ಶ್ರೀವಿಷ್ಣುತೀರ್ಥರಿಂದ ರಚಿತವಾಗುವ ಗ್ರಂಥಗಳೂ, ದುರ್ಗಾದೇವಿಯ ಅವತಾರ ಕಾಲದಲ್ಲಿ ಆಗುವ ಗ್ರಂಥಗಳಿಂದ ಆಯಾ ಕಾಲದಲ್ಲಿ ಅವುಗಳು ವಿಘ್ನ ಪರಿಹಾರಕವಾಗಿ ಸಾರ್ಥಕವಾಗುವುವು ಎಂದು ತಿಳಿಯಬೇಕು. ವೃನ್ದಾವನಾಖ್ಯಾನ ಸೇವೆಯಿಂದ ಆಗುವ ಸಾಕ್ಷಾತ್ ಫಲವನ್ನುಅವಿಘ್ನಂ ತ್ವಗ್ನಿಸನ್ನಿಭಂ” (VII-115) ಎನ್ನುವುದರಿಂದ ಸೂಚಿಸಿರುವರು. ಸಾಂಸಾರಿಕ ಉಪದ್ರವಗಳಿಂದ ಸಾಧನೆಗೆ ಬರುವ ವಿಘ್ನಗಳನ್ನು ಸುಟ್ಟು, ತೇಜೋವೃದ್ಧಿ ಮಾಡಿ ಸಾಧನ ಕಾರ್ಯವನ್ನು ಮಾಡಿಕೊಡುತ್ತದೆ.

ಈ ಸ್ವಾಪ್ನಕೃತಿಯಲ್ಲಿ ತನ್ನ ಭಕ್ತರ ಮನಸ್ಸು ಶಂಕಿಸುವವರ ಸಹವಾಸದಿಂದ ಚಲಿಸದೆ ಇರಲಿ ಮತ್ತು ವಿಶ್ವಾಸವು ದೃಢವಾಗಿರಲಿ ಎಂದು ಸೃಪ್ನ ಗ್ರಂಥಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹಲವೆಡ ಪ್ರಸ್ತಾಪಿಸಿರುತ್ತಾರೆ. ಸ್ವಪ್ನದ್ರಷ್ಟಾರನಾದ ವಿಪ್ರನು ಪೂರ್ವದಲ್ಲಿ ತನ್ನ ಶಿಷ್ಯನೇ ಉತ್ತಮ ಬುದ್ಧಿಯುಳ್ಳವನು. ಅವನ ಸಂಸ್ಕಾರ ವಶದಿಂದಲೇ ತಾನು ಅವನಿಗೆ ಸ್ವಪ್ನದಲ್ಲಿ ಹೇಳುವೆನು. ಹಯಗ್ರೀವ ದೇವರ ಆಜ್ಞೆಯಿಂದಲೇ ತಾನು ಪೂರ್ವ ಸಂಸ್ಕಾರ ಕಾರಣವನ್ನು ತಿಳಿಯುವೆನು. ಜಾತಿಸ್ಮರಣಶೀಲನಾಗಿರುವೆನು ಎಂದು XI-5-6ರಲ್ಲಿ ಹೇಳಿದ್ದಾರೆ. ಲೌಕಿಕ ಅಲೌಕಿಕ ವಾಕ್ಯ ಲಕ್ಷಣಗಳನ್ನು ತಿಳಿದಿರುವ ಚತುರರು ಅಲೌಕಿಕವಾದ (ಅಂದರೆ ವೇದತುಲ್ಯವಾದ) ತನ್ನ ಗ್ರಂಥದಲ್ಲಿ ಅಪ್ರಾಮಾಣ್ಯ ಶಂಕೆಯನ್ನು ಮಾಡಬಾರದು. ಸ್ವಾಪ್ನ ಕೃತಿಯು ವಾಸನಾಮಯವಾದ್ದರಿಂದ ತಾತ್ಪರ್ಯಾರ್ಥವನ್ನು ತಿಳಿಯಬೇಕು. ಶಬ್ದಾರ್ಥವನ್ನಲ್ಲ. ವಾಸನಾತ್ಮಕ ಶಬ್ದಗಳಿಗೆ ಅರ್ಥದರ್ಶನವೇ ಯಥಾರ್ಥವಾದುದು. ಶಬ್ದಬೋಧಕ ಅರ್ಥವು ಆಪೇಕ್ಷಿತವಲ್ಲ. ಸ್ವಾಪ್ನವಾಕ್ಯಾರ್ಥಗಳ ನಿರ್ಣಯ ಪ್ರಕಾರವು ಈ ರೀತಿಯಾಗಿರುವುದೆಂದು XII-1-2ರಲ್ಲಿ ಯಾವ ರೀತಿ ಸ್ವಾಪ್ನ ಗ್ರಂಥವನ್ನು ತಿಳಿಯಬೇಕೆಂಬುದನ್ನು ತಿಳಿಸಿದ್ದಾರೆ. ಶ್ರೀಹಯಗ್ರೀವ ದೇವರಿಂದ ಉಪದಿಷ್ಟವಾದ ಶ್ರುತ್ಯರ್ಥವೇ ಸಹಸ್ರಪದ್ಯರೂಪವಾಗಿ ಆಖ್ಯಾನರೂಪದಲ್ಲಿ ತನ್ನಿಂದ ಸಂಗ್ರಹಿಸಲ್ಪಟ್ಟಿದೆ. ಈ ಸಹಸ್ರಪದ್ಯ ರೂಪ ಪದ್ಮವು ಶ್ರೀಹಯಗ್ರೀವ ದೇವರಿಂದ ಆಘ್ರಾಣಿಸಿ ಶಿರಸ್ಸಿನಲ್ಲಿ ಧರಿಸುವ ಮೂಲಕ ಮಾನಿತವಾಗಿದೆ ಎಂದು VII-8ರಲ್ಲಿ ಹೇಳಿ, ಈ ಗ್ರಂಥವು ವೇದತುಲ್ಯಗ್ರಂಥ, ಸರ್ವರಿಂದಲೂ ಮಾನ್ಯವಾದುದುಎನ್ನುವುದನ್ನು ಸೂಚಿಸಿದ್ದಾರೆ. XVI-74ರಲ್ಲಿಸಂಶಯಾತ್ಮಾ ನಶ್ಯತಿಎಂದಿರುವುದರಿಂದ, ಶ್ರೀವಾದಿರಾಜ ಗುರು ಸಾರ್ವಭೌಮರ ಭಕ್ತರು – ಶಂಕಿಸುವವರ ಬಲೆಗೆ ಬೀಳದೆ, ಆಖ್ಯಾನದಲ್ಲಿ ವಿಶ್ವಾಸವಿಟ್ಟು, ಅಧ್ಯಯನ ಪಾರಾಯಣಾದಿಗಳನ್ನು ಮಾಡುತ್ತಾ, ನಿತ್ಯದಲ್ಲೂ ಪೂಜಿಸುತ್ತಾ ಶ್ರೀವಾದಿರಾಜರ ಕೃಪೆಗೆ ಪಾತ್ರರಾಗಬೇಕು ಮತ್ತು ಆಖ್ಯಾನದಲ್ಲಿ ಉಕ್ತವಾದ ಘಲಗಳನ್ನು ಪಡೆಯುವವರಾಗಬೇಕು. ಗೂಢಾರ್ಥವುಳ್ಳ ಈ ಗ್ರಂಥದಲ್ಲಿ ಪ್ರಥಮ ನಾಲ್ಕು ಅಧ್ಯಾಯಗಳು ಲೌಕಿಕರಿಗೂ, ವೈಭವ ಪರ್ವದ ವ್ಯಾಖ್ಯಾನವು ಸಾಧಕರಿಗೂ, ನಿದರ್ಶನ ಪರ್ವದ ವ್ಯಾಖ್ಯಾನವು ವಿಶೇಷಜ್ಞರಿಗೂ ಯೋಗ್ಯವಾದವುಗಳೆಂದೂ, ಅವುಗಳನ್ನು ಅವರವರಿಗೆ ಹೇಳಲು ಆದೇಶವಿದೆ.

I-32-34ರಲ್ಲಿ ಪರಮ ಪೂಜ್ಯ ಶ್ರೀಹಯಗ್ರೀವ ದೇವರ ಆಜ್ಞೆಯಿಂದ ಸಕಲತೀರ್ಥಾಭಿಮಾನಿ, ಕ್ಷೇತ್ರಾಭಿಮಾನಿ, ಪರ್ವತಾಭಿಮಾನಿ, ವನಾಭಿಮಾನಿ, ಪುಷ್ಕರಿಣ್ಯಭಿಮಾನಿ ದೇವತೆಗಳು ತೇಜೋರೂಪದಿಂದ ವೃನ್ದಾವನದಲ್ಲಿಯೂ, ಜಲರೂಪದಿಂದ ಧವಳಗಂಗಾ ಸರೋವರದಲ್ಲಿಯೂ, ಸನ್ನಿಹಿತರಾಗಿರುವುದರಿಂದ ಧವಳವೆಂಬ ಈ ಸರೋವರದ ಸ್ನಾನ ಮತ್ತು ಈ ವೃನ್ದಾವನದ ದರ್ಶನದಿಂದ ಸರ್ವ ಪಾಪಗಳ ಸಮೂಹವು ನಾಶವಾಗುತ್ತದೆ. ಸೇವಕ ವಿಪ್ರನ ಮುಖಾಂತರ, ಸರ್ವವೈಭವವನ್ನೂ ಸರ್ವಸಜ್ಜನರೂ ಕೇಳಿ ಶ್ರದ್ಧಾಳುಗಳಾಗಿ ಅತ್ಯಂತ ಭಕ್ತಿಯಿಂದ ಭಜಿಸಿದರೆ ಸರ್ವಾಭೀಷ್ಟಗಳನ್ನು ಪಡೆಯುವರು. ಸಕಲ ಪಾಪಗಳು ಪರಿಹಾರವಾಗುವುವು. ಈ ವೃನ್ದಾವನದ ಸ್ತೋತ್ರವನ್ನು ಶುಚಿರ್ಭೂತನಾಗಿ ಯಾರು ತ್ರಿಕಾಲದಲ್ಲಿ ಪಠಿಸುವರೋ, ಅವರಿಗೆ ಶ್ರೀವಾದಿರಾಜರ ಅನುಗ್ರಹದಿಂದ ಅಕಾಲಮೃತ್ಯುವು ಉಂಟಾಗುವುದಿಲ್ಲವೆಂದು ವೃನ್ದಾವನ ಸೇವಾಘಲರೂಪ ತಮ್ಮ ಅನುಗ್ರಹವನ್ನು ತಿಳಿಸಿದ್ದಾರೆ. I-111ರಲ್ಲಿ ವೇದವ್ಯಾಸರ ಆಜ್ಞೆಯಿಂದ ಈ ವೃನ್ದಾವನಾಖ್ಯಾನವನ್ನು ಪಠಿಸುವ ಜ್ಞಾನಿಗಳು ಮುಕುಂದನಿಂದ ರಕ್ಷಿತರಾಗುತ್ತಾರೆ ಎಂದಿದ್ದಾರೆ, I-113ರಲ್ಲಿ ಈ ವೃನ್ದಾವನಾಖ್ಯಾನವು ಶ್ರವಣ ಮಾಡುವವರಿಗೆ, ಅನಂತಗುಣರೂಪಿಯಾದ ಶ್ರೀ ಹರಿಯಲ್ಲಿಯೂ, ಹಾಗೆಯ ಹರಿಲೋಕಗತರಾದ ಶ್ರೀವಾದಿರಾಜರಲ್ಲಿಯೂ ಭಕ್ತಿಯನ್ನು ಹುಟ್ಟಿಸಿ, ಸರ್ವಶುಭಾಪ್ತಿಯನ್ನೂ ಸನ್ಮತಿಯನ್ನೂ ನಿರಂತರವಾಗಿ ಕೊಡುತ್ತದೆ ಎಂದು ವೃನ್ದಾವನಾಖ್ಯಾನವನ್ನು ಸೇವಿಸುವವರಿಗೆ ಫಲವನ್ನು ಹೇಳಿದ್ದಾರೆ. ಆದ್ದರಿಂದ ಈ ಗ್ರಂಥವನ್ನು ಪಠಿಸುವವರೂ, ಶ್ರವಣ ಮಾಡುವವರೂ, ಪೂಜಿಸುವವರೂ ಭಾವಿಸಮೀರ ಶ್ರೀವಾದಿರಾಜ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವರೆನ್ನುವುದು ನಿಸ್ಸಂಶಯ.

ಸುಮಾರು 25 ವರ್ಷಗಳ ಹಿಂದಯೇ ಮಧ್ವಶಾಸ್ತ್ರಸಂಪನ್ನರಾದ ಮೈಸೂರಿನ ಶ್ರೀ ಹೆಚ್. ಸುಬ್ಬರಾಯರು ನನಗೆ ವೃನ್ದಾವನಾಖ್ಯಾನ ಪಾಠವನ್ನು ಹೇಳಿದ್ದರು. ಕೆಲವು ಸಮಯಾನಂತರ ಅಂದರೆ 1973ರಲ್ಲಿ ನನ್ನ ಉಪಯೋಗಕ್ಕೆಂದೇ, ಈ ಆಖ್ಯಾನದ ಅನುವಾದವನ್ನು ಮಾಡಿ, ಅದರಲ್ಲಿರಬಹುದಾದ ಲೋಪದೋಷಗಳನ್ನು ಸರಿಪಡಿಸಿಕೊಡಬೇಕೆಂದು ನನ್ನ ಗುರುಗಳಾದ ಶ್ರೀಮಾನ್ ಸುಬ್ಬರಾಯರಲ್ಲಿ ಪ್ರಾರ್ಥಿಸಿಕೊಳ್ಳಲು ಅವರು ಸಂತೋಷದಿಂದ ಆ ಕಾರ್ಯವನ್ನು ಮಾಡಿಕೊಟ್ಟರು. ಈ ಆಖ್ಯಾನ ಗ್ರಂಥಕ್ಕೆ ಇರುವ ಶ್ರೀಮುಷ್ಣಾಚಾರ್ಯರ ವ್ಯಾಖ್ಯಾನಕ್ಕೆ ಅಲ್ಲಲ್ಲಿ ತಾವು ಮಾಡಿದ ವ್ಯಾಖ್ಯಾನವನ್ನು ಹಾಗೂ ಕೆಲವು ವಿಷಯಗಳನ್ನು ಶ್ರೀಮಾನ್ ಸುಬ್ಬರಾಯರು ಸೇರಿಸಿದ್ಧರು, ಅದನ್ನು ಅನುಸರಿಸಿಯಂ ಅನುವಾದವನ್ನು ಮಾಡಿಟ್ಟುಕೊಂಡಿದ್ದೆನು. ಟಿಪ್ಪಣಿಯಲ್ಲಿ ಸೇರಿಸಿರುವ ಹಲವು ವಿಷಯಗಳು ಶ್ರೀಮಾನ್ ಸುಬ್ಬರಾಯರದ್ದೇ ಆಗಿರುತ್ತದೆ. ಹೀಗೆ ಅನುವಾದ ಮಾಡಿ ಬರೆದಿಟ್ಟುಕೊಂಡಿದ್ದ ಪುಸ್ತಕವು ಶ್ರೀಸುಬ್ಬರಾಯರ ಮೂಲಕವೇ ಅವರ ಕೆಲವು ಶಿಷ್ಯರುಗಳ ಉಪಯೋಗಕ್ಕಾಗಿ ಹೋಗಿತ್ತು. ಅದನ್ನು ಮುದ್ರಿಸುವ ಆಲೋಚನೆಯೇ ಇರಲಿಲ್ಲ. ಇತ್ತೀಚೆಗೆ ಬೇಲೂರಿನ ಶ್ರೀ ಕೆ. ಶ್ರೀಧರ ಹತ್ವಾರರು ನಮ್ಮ ಮನೆಗೆ ಬಂದಾಗ ಆ ಪುಸ್ತಕಗಳನ್ನು ನೋಡಿದ್ದರು. ನನಗೆ ಮುಂಚಿತವಾಗಿ ಏನನ್ನೂ ತಿಳಿಸದೆಯೇ, ಅವರೇ ಆ ಪುಸ್ತಕಗಳ ಮುದ್ರಣಕ್ಕೆ ಏರ್ಪಾಡು ಮಾಡಿದ್ದರು. ನಮ್ಮ ನಲ್ಮೆಯ ಗುರುಗಳಾದ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರ ಅರವತ್ತನೆಯ ವರ್ಧಂತಿಯನ್ನು ಆಚರಿಸಬೇಕೆಂದು, ಕೋಟೇಶ್ವರ ಮಾಗಣೆಯ ಶಿಷ್ಯವೃಂದದವರುಶ್ರೀಲಾತವ್ಯಾತ್ಮಕ ವಾದಿರಾಜಗುರು ಸೇವಾ ಸಮಿತಿಎನ್ನುವ ಸಮಿತಿಯನ್ನು ರಚಿಸಿ, ಸೋದಾ ಕ್ಷೇತ್ರದಲ್ಲಿ ಸಭೆ ಸೇರಿ, ಈ ಗ್ರಂಥವನ್ನು ಮುದ್ರಿಸಲು, ಹಾಗೂ ಮುದ್ರಿತವಾದ ಗ್ರಂಥದ ಬಿಡುಗಡೆಯನ್ನು ವರ್ಧಂತ್ಯುತ್ಸವ ಸಂದರ್ಭದಲ್ಲಿ ಮಾಡಲು ಶ್ರೀ ಶ್ರೀಗಳವರ ಅನುಜ್ಞೆಯನ್ನು ಪಡೆದರು. ಅದರ ಫಲವಾಗಿ ಈ ಕೃತಿಯು ತಮ್ಮಲ್ಲರ ಮುಂದಿದೆ.

ಈ ಮಹಾನ್ ಗ್ರಂಥದ ಅಧ್ಯಯನವನ್ನು ಮಾಡಿಸಿ, ನಾನು ಬರೆದ ಅನುವಾದದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಕೊಡುವ ಮೂಲಕ ನನಗೆ ಪರಮೋಪಕಾರವನ್ನು ಮಾಡಿದ ನನ್ನ ಗುರುಗಳಾದ ಮೈಸೂರಿನ ಶ್ರೀ ಎಚ್. ಸುಬ್ಬರಾಯರು ಇಂದು ನಮ್ಮ ಕಣ್ಣ ಮುಂದಿಲ್ಲ. ಈ ಸಂದರ್ಭದಲ್ಲಿ ನಾನು ಅವರನ್ನು ಸ್ಮರಿಸಿ, ಈ ಗ್ರಂಥದ ಮುದ್ರಣ ಮತ್ತು ಬಿಡುಗಡೆಗೆ ಸಹಾಯ ಮಾಡಿದವರಿಗೆಲ್ಲರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ವಿಶೇಷವಾಗಿ ಈ ಗ್ರಂಥವನ್ನು ಅವಲೋಕಿಸಿ, ಮುದ್ರಿಸಬೇಕೆಂದು ಆಲೋಚಿಸಿ, ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿದ ಬೇಲೂರಿನ ಶ್ರೀ ಕೆ. ಶ್ರೀಧರ ಹತ್ವಾರರಿಗೂ, ಶ್ರೀವಿಶ್ವೋತ್ತಮತೀರ್ಥರ 60ನೇ ವರ್ಧಂತಿ ಸಮಯದಲ್ಲಿ ಬಿಡುಗಡೆ ಮಾಡುವ ಹೊಣೆಯನ್ನು ಹೊತ್ತ ಶ್ರೀಲಾತವ್ಯಾತ್ಮಕ ವಾದಿರಾಜಗುರು ಸೇವಾ ಸಮಿತಿ ಮತ್ತು ಸಮಿತಿಯ ಎಲ್ಲಾ ಸದಸ್ಯರಿಗೂ, ಈ ಕಾರ್ಯದಲ್ಲಿ ತನುಮನಧನಗಳಿಂದ ಸಹಾಯ ಮಾಡಿದ ಶ್ರೀ ಎಚ್. ಸೀತಾರಾಮರಾಯರು ಮತ್ತು ಶ್ರೀ ಎಚ್. ಶಾಂತಾರಾಮರಾಯರಿಗೂ, ಆಸಕ್ತಿವಹಿಸಿದ ಶ್ರೀ ಎಚ್. ಸುಬ್ಬರಾಯರಿಗೂ, ಮುದ್ರಣಕಾರ್ಯದಲ್ಲಿ ಬಹುಶ್ರಮವಹಿಸಿ ಸಹಕರಿಸಿದ ಶ್ರೀ ವ್ಯಾಸಾಚಾರ್ಯರಿಗೂ ಮತ್ತು ಮಜೆಸ್ಟಿಕ್ ಪ್ರೆಸ್ಸಿನ ಶ್ರೀ ಭಾಸ್ಕರ ರಾಯರಿಗೂ, ಮುದ್ರಣ ಲೋಪದೋಷಗಳನ್ನು ತಿದ್ದಿ ನೆರವು ನೀಡಿದ ಮ.ಶಾ.ಸಂ. ಶ್ರೀ ಕಟ್ಟೆ ವಾದಿರಾಜಾಚಾರ್ಯರಿಗೂ, ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಶ್ರೀಲಕ್ಷ್ಮಿನಾರಾಯಣ ಶರ್ಮಾರಿಗೂ, ಅಂದವಾಗಿ ಮುದ್ರಿಸಲು ನೆರವಾದ ಮಂಗಳೂರಿನ ಸ್ಕೂಲ್‌ಬುಕ್ ಕಂಪೆನಿಯವರಿಗೂ ನಾನು ಕೃತಜ್ಞನಾಗಿದ್ದೇನೆ.

ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದಂಗಳವರು ಈ ಗ್ರಂಥದ ಮುದ್ರಣ ಮತ್ತು ಬಿಡುಗಡೆಗೆ ಅನುಜ್ಞೆ ಕೊಡುವುದರ ಜೊತೆಗೆ, ಸೂಕ್ತ ಸಲಹೆಗಳನ್ನು ಕೊಟ್ಟು ಪರಮಾನುಗ್ರಹವನ್ನು ಮಾಡಿದ್ದಾರೆ. ಅವರಿಗೆ ನಾನು ಚಿರಯಣಿಯಾಗಿದ್ದೇನೆ.

ಬಿ.ಪಿ. ನಾಗಭೂಷಣ ರಾವ್