SRIMADHVYASA

Home » Srimad Bhagavad Gita- Kannada Translation by Legend Late: D Vasudevacharya; ಭಗವದ್ ಗೀತಾ – ಕನ್ನಡದಲ್ಲಿ ಅಮೋಘವಾದ ಅರ್ಥ-

Srimad Bhagavad Gita- Kannada Translation by Legend Late: D Vasudevacharya; ಭಗವದ್ ಗೀತಾ – ಕನ್ನಡದಲ್ಲಿ ಅಮೋಘವಾದ ಅರ್ಥ-

ಶ್ರೀಮದ್ಭಗವದ್ಗೀತಾ

ಹುಟ್ಟು ಸಾವುಗಳ ಮಧ್ಯೆ ಅನೇಕ ಲೌಕಿಕ ವ್ಯಾಪಾರಗಳಲ್ಲಿ ಮಿಂಚಿ ಕಡೆಗೊಮ್ಮೆ ಕಣ್ಮರೆಯಾಗುವ ಮಾನವನ ಬಾಳುವೆ ಎಷ್ಟು ಪ್ರಶ್ನೆಗಳನ್ನು ತಾನೆ ಮುಂದೂಡುವುದಿಲ್ಲ. ಹುಟ್ಟು ಸಾವುಗಳು ಎಷ್ಟು ನಿಶ್ಚಿತವೋ ಅವುಗಳ ಸ್ವರೂಪವೂ ಅಷ್ಟೇ ಜಟಿಲ ಎಂತಲೇ ಪ್ರಾಚೀನ ಅರ್ವಾಚೀನ ಎನ್ನುವ ಭೇದವಿಲ್ಲದೆ ದೇಶ ಕಾಲದ ಪರಿಮಿತಿಯನ್ನು ಮೀರಿ ಎಲ್ಲ ಜಿಜ್ಞಾಸುಗಳ ವಿಚಾರಕ್ಕೂ ಈ ಪ್ರಶ್ನೆಯೇ ಪ್ರಧಾನವಾಗಿದೆ. ಮಾನವನ ಬಾಳುವೆಯ ಪೂರ್ವೋತ್ತರಗಳೇನು? ಸೃಷ್ಟಿ ನಿಯಮದ ಆವರಣವೇನು? ಲೌಕಿಕವ್ಯಾಪಾರಗಳೂ ಅಲೌಕಿಕ ಅನುಷ್ಠಾನವೂ ಬಾಳುವೆಯಲ್ಲಿ ಮೇಳವಿಸುವುದೆಂತು? ಈ ದಿವ್ಯ ಸಮ್ಮೇಳನದಿಂದಾಗಿ ಜೀವ ತನ್ನ ಸಾರ್ಥಕ್ಯ ಪಡೆದುಕೊಂಡು ಬ್ರಹ್ಮಾಂಡದಲ್ಲಿ ಮುನ್ನಡೆಯುವ ಜೀವನದ ಬೃಹದ್ಧರ್ಶನವನ್ನು ಸಾಧಿಸಲು ಶಕ್ಯವೆ? ಅನಾದ್ಯನಂತವಾದ ಬ್ರಹ್ಮಾಂಡದಷ್ಟೇ ವಿಶಾಲವೂ, ಮನುಷ್ಯಮಾತ್ರರಿಗೆ ಅಗಮ್ಯವೂ ಆದ ಮಹತ್ವಪೂರ್ಣವಾದ ಪ್ರಶ್ನೆಗಳ ಪರಿಹಾರಕ್ಕೆ ಭಗವದ್ಗೀತೆಗಿಂತ ಬೇರೊಂದು ಉಪದೇಶವನ್ನು ಬೇರೆಲ್ಲಿ ತಾನೆ ಕಾಣಲು ಸಾಧ್ಯ! ಶ್ರೀಮನ್ನಾರಾಯಣನೇ ಸ್ವತಃ ಗೀತಾಚಾರ್ಯನಾಗಿ ಲೋಕಕಲ್ಯಾಣಕ್ಕಾಗಿ ದೇವಭಾಷೆಯಾದ ಸಂಸ್ಕೃತದಲ್ಲಿ ಕರುಣಿಸಿದ ಬೃಹದ್ಧರ್ಶನವು ವಿಶ್ವದ ನೂರಾರು ಭಾಷೆಗಳಲ್ಲಿ ಪರಿವರ್ತಿಸಲ್ಪಟ್ಟು, ಎಲ್ಲಾ ಜನಾಂಗಗಳ ಇಹಪರ ಶ್ರೇಯೋಮಾರ್ಗವನ್ನು ತೋರಿಸಿಕೊಡುವಂತಹ ವಿಶ್ವಮಾನ್ಯ ಉಪದೇಶವಾಗಿದೆ.

ಲೋಕದಲ್ಲಿ ನಾನು ಎಂಬ ಭಾವನೆ ಜನಜನಿತವಾಗಿದೆ. ಅದರ ತತ್ವವಾದರೋ ಬಹು ಗಹನವಾದದ್ದು. ನಾನು ಎಂಬ ವಸ್ತುವಾವುದು? ನಾನು ಎಲ್ಲಿಂದ ಹೇಗೆ ಬಂದಿರುವನು? ಎಲ್ಲಿ ಸೇರುವೆನು? ನನ್ನ ಈ ಬಾಳುವೆಯು ಶಾಶ್ವತವೇ? ಅಥವಾ ನನಗೆ ಬೇರೊಂದು ಶಾಶ್ವತವಾದ ನೆಲೆಯಿದೆಯೇ? ಜೀವನದಲ್ಲಿ ನನ್ನ ಮುಖ್ಯ ಗುರಿ ಯಾವುದು? ಅದನ್ನು ಸಾಧಿಸುವ ಬಗೆ ಹೇಗೆ? ಅದನ್ನು ಸಾಧಿಸಲು ನಾನೇ ಸಮರ್ಥನೇ ಅಥವಾ ಇತರರ ಸಹಾಯ ಬೇಕೇ? ಅಂತಹ ಸಹಾಯ ನೀಡುವವನಾರು? ಅವನು ಎಂತಹವನು? ಅವನ ಪ್ರಸಾದವನ್ನು ಪಡೆಯುವ ಬಗೆ ಎಂತು? ಅದಕ್ಕಾಗಿ ಈಗ ನನ್ನ ಕರ್ತವ್ಯವೇನು? ಇವೇ ಮುಂತಾದ ಹಲವಾರು ಕಠಿನ ಸಮಸ್ಯೆಗಳು ಮನುಷ್ಯನ ಬೆನ್ನುಹತ್ತಿವೆ. ಪಶು-ಪಕ್ಷಿ ಮುಂತಾದುವುಗಳಾಗಿ ಹುಟ್ಟಿದಾಗ ಇವನ್ನು ಬಗೆಹರಿಸಿಕೊಳ್ಳುವಂತಹ ವಿವೇಚನಶಕ್ತಿಯಿರುವುದಿಲ್ಲ. ಈ ಶಕ್ತಿಯು ಮಾನವನಿಗೇ ಮೀಸಲಾಗಿದೆ. ಇದೇ ಪಶು-ಮನುಷ್ಯರಲ್ಲಿ ಭಗವಂತನು ಇಟ್ಟಿರುವ ವ್ಯತ್ಯಾಸವು.

ಮನುಷ್ಯ ಜನ್ಮವು ಸುಲಭವಾಗಿ ಲಭಿಸತಕ್ಕುದಲ್ಲ. ಎಷ್ಟೋ ಪಶ್ವಾದಿ ಜನ್ಮಗಳು ಕಳೆದ ನಂತರ ಪೂರ್ವಪುಣ್ಯ ಪರಿಪಾಕದ ಫಲವಾಗಿ ಭಗವಂತನು ಮನುಷ್ಯ ಜನ್ಮ ಕೊಡುವನು. ಭಗವಂತನು ಇಂತಹ ಸುಸಂದರ್ಭವನ್ನು ಒದಗಿಸಿಕೊಟ್ಟಿರುವಾಗ ಮೇಲ್ಕಂಡ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕರ್ತವ್ಯಪರನಾಗಿ ಮುಖ್ಯಗುರಿಯನ್ನು ಸಾಧಿಸಿ ಜನ್ಮವನ್ನು ಸಾರ್ಥಕಗೊಳಿಸಬೇಕು.

ಆದರೆ ನಮ್ಮನ್ನು ಎಡಬಿಡದೆ ಬೆಂಬಾಲಿಸುವ ನೆರಳಿನಂತಿರುವ ಮೇಲ್ಕಂಡ ಸಮಸ್ಯೆಗಳ ರಹಸ್ಯವನ್ನರಿತಹೊರತು ಶಾಂತಿಯ ಸುಪಥವು ದೊರೆಯಲಾರದು. ಅನುಭವ, ಯುಕ್ತಿ, ಅರ್ಥಶಾಸ್ತ್ರ, ನೀತಿಶಾಸ್ತ್ರ, ವಿಜ್ಞಾನಶಾಸ್ತ್ರ ಮುಂತಾದ ಯಾವ ಸಾಧನೆಯಿಂದಲೂ ಆ ರಹಸ್ಯವನ್ನು ಭೇದಿಸಲಾಗುವುದಿಲ್ಲ. ಅದರ ಅರಿವಿಗೆ ಅಧ್ಯಾತ್ಮಶಾಸ್ತ್ರವೊಂದೇ ದಾರಿಯು, ಅದಾದರೂ ಉಪನಿಷದಾದಿಗಳಲ್ಲಿ ಗುಂಭಿತವಾಗಿ ಅತ್ಯಂತ ಗಹನವಾಗಿದೆ. ಎಲ್ಲರಿಗೂ ಸುಗಮವಾಗಿಲ್ಲ. ಹೀಗೆ ಜೀವನದ ಗುರಿ ಮುಟ್ಟಲು ದಾರಿಗಾಣದೆ ನರಳುತ್ತಿರುವವರಲ್ಲಿ ದಯೆಮಾಡಿ ಶ್ರೀಕೃಷ್ಣ ಪರಮಾತ್ಮನು ಸಮೀಪದಲ್ಲಿದ್ಧ ಅರ್ಜುನನಿಗೇ ಅಂತಹ ಪ್ರಸಂಗವನ್ನೊದಗಿಸಿ, ಅವನ ನೆಪದಿಂದ ಲೋಕಕ್ಕೇ ಈ ಗೀತೆಯನ್ನುಪದೇಶ ಮಾಡಿರುವನು. ಇದು ಅಧ್ಯಾತ್ಮತತ್ವಗಳಿಗೆ ಗಣಿಯಂತಿದೆ. ಇದರಲ್ಲಿ ಆತ್ಮತತ್ವ, ಕರ್ತವ್ಯವಿವೇಚನೆ, ಇಹಪರಗಳಲ್ಲಿ ಮನುಷ್ಯನು ಶ್ರೇಯಸ್ಸನ್ನು ಪಡೆಯುವ ಬಗೆ ಮುಂತಾದ ಜ್ಞೇಯ ವಿಷಯಗಳೆಲ್ಲವೂ ಅಡಗಿವೆ. ಇದರ ಅಧ್ಯಯನದಿಂದ ಮನುಷ್ಯನು ಕಣ್ತೆರೆದು ಮನಬಿಚ್ಚಿ ತಮತಮ್ಮ ಯೋಗ್ಯತಾನುಸಾರವಾಗಿ ತತ್ವವನ್ನರಿತು ಕರ್ತವ್ಯಪರನಾಗಿ ಸುಖಮಯ ಜೀವನವನ್ನು ಕಾಣಬಹುದು. ಹೀಗೆ ವಿಶ್ವವೇ ಹಂಬಲಿಸಿ ಬಯಸುತ್ತಿರುವ ಅಧ್ಯಾತ್ಮ ರಹಸ್ಯವನ್ನು ಬೋಧಿಸಿ ಸುಪಥವನ್ನು ತೋರಿಸಿರುವ ಈ ಭಗವದ್ಗೀತೆಯು ವಿಶ್ವಮಾನ್ಯವೆಂಬಲ್ಲಿ ಆಶ್ಚರ್ಯವೇನು !

ಪ್ರಾಮಾಣ್ಯ

ಮತಸ್ಥಾಪಕಾಚಾರ್ಯರೆಲ್ಲರೂ ಭಾರತ-ರಾಮಾಯಣಾದಿ ಪ್ರಸಿದ್ಧೇತಿಹಾಸ, ಭಾಗವತಾದಿಪುರಾಣ ಇವಾವುದಕ್ಕೂ ಭಾಷ್ಯವನ್ನು ಮಾಡಿಲ್ಲವಾದರೂ ಈ ಭಗವದ್ಗೀತೆಗೆ ಮಾತ್ರ ಭಾಷ್ಯವನ್ನು ಮಾಡದೇ ಬಿಟ್ಟಿಲ್ಲ. ತತ್ವಶಾಸ್ತ್ರದಲ್ಲಿ: ಉಪನಿಷತ್ತು-ಬ್ರಹ್ಮಸೂತ್ರಗಳಂತೆ ಶ್ರೀಮದ್ಭಗವದ್ಗೀತೆಯೂ ಸಹ ಪ್ರಮುಖ ಸ್ಥಾನವನ್ನು ಪಡೆದಿದೆ. ಉಪನಿಷತ್ಪಸ್ಥಾನ, ಸೂತ್ರಪ್ರಸ್ಥಾನ, ಗೀತಾಪ್ರಸ್ಥಾನ ಎಂಬ ಪ್ರಸ್ಥಾನತ್ರಯವೇ ತತ್ವಶಾಸ್ತ್ರಕ್ಕೆ ಮೂಲವು. ಇತ್ತೀಚಿನವರಾದ ಶ್ರೀ ಬಾಲಗಂಗಾಧರತಿಲಕರು, ಬಾಬು ಅರವಿಂದಘೋಷರು, ಮಹಾತ್ಮಾ ಗಾಂಧಿಜೀಯವರೇ ಮುಂತಾದ ಅನೇಕ ಮಹಾಶಯರೂ ಸಹ ತಮ್ಮ ತಮ್ಮ ವಾದಗಳಿಗೆ ಗೀತೆಯೇ ಮೂಲವೆಂದು ಭಾವಿಸಿರುವರು. ಮ್ಯಾಕ್ಸ್ಮುಲರ್‌, ಕ್ಯಾಂಟ್, ಡ್ಯುಸನ್, ಆನಿಬೆಸೆಂಟ್, ಬ್ರೂಕ್ಸ್ ಮುಂತಾದ ಪಾಶ್ಚಾತ್ಯ ಪಂಡಿತರೂ ಸಹ ಈ ಗೀತೆಯು ಮಾನ್ಯ ತತ್ವಗ್ರಂಥವೆಂದು ಹೊಗಳಿರುತ್ತಾರೆ. ಹೀಗೆ ಸರ್ವ ಜನರ ಮನ್ನಣೆಗೆ ಪಾತ್ರವಾದ ಈ ಗ್ರಂಥವು ಪ್ರಮಾಣವೇ? ಅಲ್ಲವೇ? ಎಂಬ ಸಂಶಯವೇ ಬರಲಾರದು. ನವನಾಗರಿಕ ಪದ್ಧತಿಯಂತೆ ಗೀತೆಯು ಪ್ರಮಾಣವೆಂಬಲ್ಲಿ ಮೇಲ್ಕಂಡ ಬಹುಮತವೇ (Majority) ಸಾಧಕವಾಗಿದೆ. ಹಿಂದೆಯೂ ಬಹುಮತದಿಂದ ವಿಷಯವನ್ನು ನಿರ್ಣಯಿಸುವ ಪದ್ಧತಿಯಿತ್ತು. ಈಗ್ಗೆ ಸುಮಾರು 1200 ವರ್ಷಗಳ ಹಿಂದೆ ನ್ಯಾಯದರ್ಶನ ಸ್ಥಾಪಕರಾದ ಉದಯನಾಚಾರ್ಯರು ಬೌದ್ಧಮತವನ್ನು ಖಂಡಿಸಿ ವೇದ! ಪ್ರಾಮಾಣ್ಯವನ್ನು ಸಮರ್ಥನೆ ಮಾಡುವಾಗ ಮಹಾಜನಪರಿಗೃಹೀತತ್ವ ಎಂದರೆ ಬಹುಮತವನ್ನು ಪ್ರಾಮಾಣ್ಯ ಸಾಧಕವಾಗಿ ಆತ್ಮತತ್ವವಿವೇಕವೆಂಬ ಗ್ರಂಥದಲ್ಲಿ ಹೇಳಿರುತ್ತಾರೆ. ಹೀಗೆ ಪ್ರಾಚೀನ ನವೀನೋಭಯ ಸಂಪ್ರದಾಯಗಳಲ್ಲಿಯೂ ಸಾಧಕವೆಂದು ಪರಿಗಣಿಸಿರುವ ಬಹುಮತವು ಗೀತೆಗಿರುವುದರಿಂದ ಅದು ಪರಮಪ್ರಮಾಣವೆಂದು ನಿರ್ಣಯಿಸಬಹುದು.

ಪೌರುಷೇಯಗ್ರಂಥಗಳಲ್ಲಿ ಆಪ್ತ ಪ್ರಣೀತ ಗ್ರಂಥವೇ ಪ್ರಮಾಣವೆನಿಸುವುದು. ಗ್ರಂಥೋಕ್ತ ವಿಷಯಗಳ ಯಥಾರ್ಥಜ್ಞಾನ, ವಿಷಯನಿರೂಪಣೆ ಮಾಡಬೇಕೆಂಬ ಉತ್ಸಾಹ, ವಿಷಯವನ್ನು ಬೋಧಕವಾಗಿ ನಿರೂಪಿಸುವ ಶಕ್ತಿ, ವಂಚನೆ ಮಾಡಬಾರದೆಂಬ ದೀಕ್ಷೆ ಇವುಗಳುಳ್ಳವನೇ ಆಪ್ಯನೆನಿಸುವನು. ಇವೆಲ್ಲವೂ ಭಗವದವತಾರರಾದ ಶ್ರೀವೇದವ್ಯಾಸರಲ್ಲಿ ಪುಷ್ಕಲವಾಗಿವೆಯೆಂದು ಹೇಳಬೇಕಾಗಿಯೇ ಇಲ್ಲ. ಅಂತಹ ಪರಮಾಪ್ತ ಪ್ರಣೀತವಾಗಿ ವೇದಾರ್ಥ ಪ್ರತಿಪಾದಕವಾಗಿರುವ ಕಾರಣ ಈ ಗೀತೆಯು ಪರಮಪ್ರಮಾಣವೆಂಬ ನಿರ್ಣಯವು ಇನ್ನೂ ದೃಢವಾಗುವುದು.

ಅಪ್ರಾಮಾಣ್ಯ ಶಂಕಾಪರಿಹಾರ

ಗೀತೆಯು ವಾಕ್ಯರೂಪವಾಗಿದೆ. ವಾಕ್ಯವು ಸ್ವತಃ ಅಪ್ರಮಾಣವಾಗಲಾರದು. ಅದನ್ನು ರಚಿಸಿದವರ ದೋಷದಿಂದ ಅದು ಅಪ್ರಮಾಣವಾಗಬಹುದು. ಪ್ರಮಾದ, ಅಜ್ಞಾನ, ಸಂಶಯ, ಭ್ರಾಂತಿ, ವಂಚನೆ ಇವು ವಕ್ತೃವಿಗೆ ಸಂಭಾವಿತ ದೋಷಗಳು. ಇವುಗಳಲ್ಲಿ ಯಾವುದಿದ್ದರೂ ಅಂತಹವನಿಂದ ರಚಿತ ಗ್ರಂಥವು ಅಪ್ರಮಾಣವೇ ಸರಿ. ಪ್ರಕೃತ ಗೀತೆಯನ್ನು ರಚಿಸಿದವರು ಶ್ರೀಕೃಷ್ಣ ದೈಪಾಯನವ್ಯಾಸರು, ಇವರು ನಾರಾಯಣಾವತಾರರೆಂದು

ಕೃಷ್ಣ ದೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಮ್ |
ಕೋಽನ್ಯೋ ಹಿ ಭುವಿ ಮೈತ್ರೇಯ ಮಹಾಭಾರತ ಕೃದ್ಭವೇತ್ – ವಿಷ್ಣು ಪುರಾಣ

ಎಂಬ ವಚನದಿಂದ ತಿಳಿದುಬರುತ್ತದೆ. ಆದುದರಿಂದ ವ್ಯಾಸರು ಸರ್ವಜ್ಞರು ಮತ್ತು ಸರ್ವಶಕ್ತರು ಎಂದು ಸಿದ್ಧಿಸಿತು.

ಗೀತಾರಚನೆಯ ಸಂದರ್ಭ ಪರಿಶೀಲನೆಯಿಂದ ವಕ್ತನಲ್ಲಿ ವಂಚನೆಯುಂಟು ಅಥವಾ ಇಲ್ಲವೆಂಬುದನ್ನು ನಿರ್ಧರಿಸಬೇಕು. ಸಂದರ್ಭವಾದರೂ ಹೀಗಿದೆ: – ದ್ವಾಪರಯುಗದ ಅಂತ್ಯಭಾಗದಲ್ಲಿ ಜನರು ವೇದಾರ್ಥಗಳನ್ನು ತಿಳಿಯದೆ ಪರಾಪರ ತತ್ವಜ್ಞಾನರಹಿತರಾಗಿ ಸಂಸಾರದಲ್ಲಿ ಸಿಲುಕಿ ನರಳುತ್ತಿರುವುದನ್ನು ಕಂಡು ದಯಾಳುಗಳಾದ ಬ್ರಹ್ಮಾದಿದೇವತೆಗಳು ಅಜ್ಞರಾಗಿ ಸಂಸಾರ ಕ್ಲೇಶವನ್ನನುಭವಿಸುತ್ತಿರುವ ಸಜ್ಜನರನ್ನು ತತ್ತ್ವೋಪದೇಶಮಾಡಿ ಉದ್ಧರಿಸಬೇಕೆಂದು ಶ್ರೀನಾರಾಯಣನನ್ನು ಪ್ರಾರ್ಥಿಸಿದರು. ಅದನ್ನು ಲಾಲಿಸಿ ಭಗವಂತನು ತಾನೇ ಈ ಲೋಕದಲ್ಲಿ ಅವತರಿಸಿ ವೇದವಿಭಾಗಾದಿ ಅನೇಕ ಜ್ಞಾನಕಾರ್ಯಗಳನ್ನು ಮಾಡಿ ವೇದವ್ಯಾಸ ಎಂಬ ಅಭಿಧಾನದಿಂದ ಪ್ರಸಿದ್ಧನಾದನು. ಬಳಿಕ ವೇದವ್ಯಾಸರು ವೇದದಿಂದಲೇ ಎಲ್ಲರಿಗೂ ತತ್ವಜ್ಞಾನವಾಗಲಾರದು. ಸ್ತ್ರೀ ಶೂದ್ರಾದಿ ಸಕಲ ಜನರೂ ಸುಲಭವಾಗಿ ತತ್ವಜಾನ ಹೊಂದಲೆಂಬ ಉದಾರ ಭಾವದಿಂದ ಸಕಲ ವೇದಾರ್ಥಗರ್ಭಿತವಾದ ಭಾರತ ಮತ್ತು ಭಾಗವತಾದಿ ಹದಿನೆಂಟು ಪುರಾಣಗಳನ್ನೂ ರಚಿಸಿದರು. ಹೀಗೆ ರಚಿತವಾದ ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ. ಆರನೆಯದಾದ ಭೀಷ್ಮಪರ್ವದಲ್ಲಿ ಶ್ರೀಕೃಷ್ಣೋಪದಿಷ್ಟವಾದ ಈ ಗೀತೆಯನ್ನು ಸೇರಿಸಿರುತ್ತಾರೆ. ವೇದಾದಿಶಾಸ್ತ್ರಗಳ ಸಾರವೇ ಭಾರತವು. ಅದರಲ್ಲಿಯೂ ಸಾರತಮಭಾಗವು ಈ ಗೀತೆಯೆಂದು ನಾರದೀಯಸ್ಮೃತಿ, ಮಹಾಕೂರ್ಮಪುರಾಣ ಮುಂತಾದುವುಗಳಿಂದ ತಿಳಿದುಬರುತ್ತದೆ. ಒಟ್ಟಿನಲ್ಲಿ ಅತ್ಯಂತ ಪ್ರೀತ್ಯಾಸ್ಪದರಾದ ಬ್ರಹ್ಮಾದಿಗಳ ಪ್ರಾರ್ಥನೆಯಿಂದ ದಯಾರ್ದ್ರಹೃದಯರಾಗಿ ಸ್ವತಃ ಪೂರ್ಣಕಾಮರಾದ ಶ್ರೀ ವೇದವ್ಯಾಸರು ಅಜ್ಞಜನೋದ್ದಾರಕೋಸ್ಕರವೇ ರಚಿಸಿರುವ ಈ ಗೀತೆಯಲ್ಲಿ ಸುಳ್ಳು ಹೇಳಿ ವಂಚನೆ ಮಾಡುತ್ತಾರೆಂಬ ಶಂಕೆಯೂ ಸಹ ಹುಟ್ಟಲಾರದು. ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಮಾಡಿದ ಸಂದರ್ಭವನ್ನು ಪರ್ಯಾಲೋಚಿಸಿದರೂ ಸಹ ಕರ್ತವ್ಯ ಮೂಢನಾದ ಅರ್ಜುನನ್ನುದ್ಧರಿಸುವ ಪ್ರಸಂಗವಾದ ಕಾರಣ ವಂಚನಾದಿಗಳು ಸಂದರ್ಭೋಚಿತವಲ್ಲವೆಂಬುದು ಸ್ಪಷ್ಟ ಪಡುವುದು. ಅಂತೂ ಗೀತೆಯನ್ನುಪದೇಶಿಸಿದ ಶ್ರೀಕೃಷ್ಣನು, ಅದನ್ನು ಮಹಾಭಾರತದಲ್ಲಿ ಸೇರಿಸಿದ ಶ್ರೀವೇದವ್ಯಾಸರೂ ಸಹ ಸಾಕ್ಷಾನ್ನಾರಾಯಣನೇ ಆಗಿರುವುದರಿಂದ ಸರ್ವಜ್ಞರಾದ ಅವರಲ್ಲಿ ಪ್ರಮಾದ-ಅಜ್ಞಾನ-ಭ್ರಾಂತಿಗಳಿಗೆ ಎಡೆಯಿಲ್ಲ. ಸಜ್ಜನೋದ್ಧ್ಯಾರ ಸಂದರ್ಭವಾದ ಕಾರಣ ವಂಚನೆಗವಕಾಶವಿಲ್ಲವಾಗಿ ವಾಕ್ಯಾಪ್ರಾಮಾಣ್ಯ ಕಾರಣಗಳಾವುದಕ್ಕೂ ಅವಕಾಶವಿಲ್ಲದುದರಿಂದ ಗೀತೆಯು ಅಪ್ರಮಾಣವೆಂಬ ಶಂಕಯೇ ಏಳುವುದಿಲ್ಲ.

ಗೀತೆಯು ಶಾಸ್ತ್ರವು

ಗೀತೆಯು ೭೦೧ ಶ್ಲೋಕಗಳ ಚಿಕ್ಕ ಗ್ರಂಥವಾಗಿ ಕಾಣುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿಯು ದೊಡ್ಡದೇ ಸರಿ. ಅದು ಸಾಮಾನ್ಯ ಕಾವ್ಯವಲ್ಲ. ಮೇಲೆ ಸುಲಭವಾಗಿ ತೋರಿದರೂ ಒಳಹೊಕ್ಕು ವಿಚಾರ ಮಾಡತೊಡಗಿದರೆ ಪ್ರತಿಯೊಂದು ಶ್ಲೋಕದಲ್ಲಿ, ಪದದಲ್ಲಿ, ಅಕ್ಷರದಲ್ಲಿಯೂ ಸಹ ಅಪೂರ್ವ ತತ್ವಾರ್ಥಗಳೇ ಗರ್ಭಿತವಾಗಿವೆ. ಆದುದರಿಂದ ಅದು ಉತ್ತಮಶಾಸ್ತ್ರವೆಂಬಲ್ಲಿ ಸಂದೇಹವಿಲ್ಲ. ಅದರ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿಯೂ “ಯೋಗಶಾಸ್ತ್ರೇ” ಎಂಬುದಾಗಿ ಸ್ಪಷ್ಟ ಹೇಳಿಕೆಯಿದೆ. ಶಾಸ್ತ್ರವೆಂದರೆ :-

ವಕ್ತೃಶ್ರೋತ್ರೋರಭಿಮತಮನನ್ಯಸಾಧ್ಯಂ ಫಲಮಧಿಕೃತ್ಯ
ತದ್ಧೇತುಭೂತಂ ಪ್ರಮಾಣಾಂತರಾಪ್ರಾಪ್ತಮರ್ಥ೦ ಪ್ರತಿಪಾದಯತಾಂ
ವಾಕ್ಯಾನಾಂ ಸಮೂಹೋ ಹಿ ಶಾಸ್ತ್ರಂ  – ವಿಷ್ಣು ತತ್ವವಿನಿರ್ಣಯಟೀಕಾ

ವಕ್ತೃಶ್ರೋತೃಗಳಿಗಿಷ್ಟವು, ಬೇರೆ ದಾರಿಯಿಂದ ಸಾಧಿಸಲಶಕ್ಯವೂ ಆದ ಪ್ರಯೋಜನವನ್ನುಂಟುಮಾಡುವಂತಹ, ಇತರ ಪ್ರಮಾಣಗಳಿಂದ ನಿರ್ಣೀತವಾಗದಿರುವ ಆರ್ಥವಿಶೇಷವನ್ನು ಬೋಧಿಸುವ ವಾಕ್ಯಗಳ ಸಮೂಹವೇ ಶಾಸ್ತ್ರವು, ಗೀತೆಯಲ್ಲಿ ಹೇಳಿರುವ ಆತ್ಮತತ್ವ, ಭಕ್ತಿಮಾರ್ಗ ಮುಂತಾದುವನ್ನರಿತು ಅದರಂತೆ ಆಚರಿಸುವುದರಿಂದ ಸರ್ವಾಪೇಕ್ಷಿತವಾದ ಮೋಕ್ಷವು ಲಭಿಸುತ್ತದೆ. ಅದಕ್ಕೆ ಗೀತೋಕ್ತವಾದುದೇ ಮಾರ್ಗವು :– ಬೇರೆ ದಾರಿಯಿಲ್ಲ. ಹೀಗೆ ಎಲ್ಲರಿಗೂ ಸನ್ಮಾರ್ಗ ಪ್ರದರ್ಶಕವಾದ ಗೀತೆಯು ಶಾಸ್ತ್ರವೆಂದಷ್ಟೇ ಅಲ್ಲ : ಉತ್ತಮೋತ್ತಮ ಶಾಸ್ತ್ರವೆಂದೇ ಸರ್ವಸಂಪ್ರತಿಪನ್ನವಾಗಿದೆ.

ಭಾರತಂ ಸರ್ವಶಾಸ್ತೇಷು ಭಾರತೇ ಗೀತಿಕಾ ವರಾ
ಭಾರತವ್ಯಪದೇಶೇನ ಆಮ್ನಾಯಾರ್ಥ: ಪ್ರದರ್ಶಿತಃ
ನಿರ್ಣಯಃ ಸರ್ವಶಾಸ್ತ್ರಾಣಾಂ ಸದೃಷ್ಟಾಂತೋ ಹಿ ಭಾರತೇ ಇತ್ಯಾದಿ – ಮಹಾಕೂರ್ಮಪುರಾಣ,

ಹೀಗೆ ಬಹುಪ್ರಮಾಣಗಳು ಗೀತೆಯು ಸರ್ವೋತ್ತಮ ಶಾಸ್ತ್ರವೆಂದು ಸಾರುತ್ತಿವೆ.

ಪ್ರಮಾಣವಿಷಯ ವಿವೇಕ

ಪ್ರಮಾಣವು ಪ್ರತ್ಯಕ್ಷ, ಅನುಮಾನ(ಯುಕ್ತಿ), ಆಗಮ(ಶಬ್ದ) ಎಂದು ಮೂರು ಬಗೆಯಾಗಿದೆ. ವಿಷಯವು ಇಂದ್ರಿಯಗೋಚರ ಮತ್ತು ಅಗೋಚರ(ಅತೀಂದ್ರಿಯ) ಎಂದು ಎರಡು ತೆರನಾಗಿದೆ. ಅದರಲ್ಲಿ ಮೊದಲನೆಯದನ್ನು ಪ್ರತ್ಯಕ್ಷಪ್ರಮಾಣದಿಂದ ನಿರ್ಧರಿಸಬಹುದು. ಅತೀಂದ್ರಿಯ ವಿಷಯವನ್ನು ಪ್ರತ್ಯಕ್ಷವು ಗ್ರಹಿಸಲಾರದು. ಅದನ್ನು ಗ್ರಹಿಸುವುದಕ್ಕೆ ಅನುಮಾನಾಗಮಗಳೇ ಗತಿ.

ಯುಕ್ತಿ ಪರಿಸ್ಥಿತಿ

ಅದರಲ್ಲಿಯೂ ಇತರ ಪ್ರಮಾಣಗಳನ್ನು ಲೆಕ್ಕಿಸದೆ ಯುಕ್ತಿಯೊಂದೇ ಸ್ವತಂತ್ರ ಯುಕ್ತಿವಾಗಿ ಯಾವ ಅಪೂರ್ವ ತತ್ವವನ್ನೂ ನಿರ್ಧರಿಸಲಾರದು. ಯುಕ್ತಿಯು ಪುರುಷಬುದ್ಧಿ ಕಲ್ಪಿತವು. ಪುರುಷನು ಸರ್ವಜ್ಞನಲ್ಲ. ಪ್ರತಿಯೊಬ್ಬ ಮನುಷ್ಯನ ಬುದ್ಧಿಗೂ ತಾರತಮ್ಯವಿದೆ. ಒಬ್ಬನು ಸಾಧುವೆಂದು ಗ್ರಹಿಸಿದ ವಿಷಯವು ಇನ್ನೂಬನ ಊಹೆಗೆ ಅಸಾಧುವಾಗಿ ತೋರುವುದು ಸಹಜ. ಆದಕಾರಣ ಅನುಮಾನದಿಂದ ತತ್ವವನ್ನು ನಿರ್ಧರಿಸಲು ಇತರ ಪ್ರಮಾಣಗಳ ಸಹಕಾರ ಬೇಕು. ಅನೇಕ ಸಂದರ್ಭಗಳಲ್ಲಿ ವಿರುದ್ಧವಾದ ಎರಡು ಪಕ್ಷಗಳಿಗೂ ಯುಕ್ತಿಯು ತೋರುವುದು. ಹೇಗೆಂದರೆ:- ಬಹುಪುತ್ರರನ್ನಪೇಕ್ಷಿಸಬಹುದೇ? ಅಥವಾ ಅಪೇಕ್ಷಿಸಬಾರದೇ? ಎಂಬ ವಿಷಯವನ್ನು ವಿಮರ್ಶಿಸತೊಡಗಿದರೆ ಎರಡೂ ಪಕ್ಷಗಳಿಗೂ ಯುಕ್ತಿಯು ತೋರುವುದು:– ಬಹುಪುತ್ರರನ್ನಪೇಕ್ಷಿಸುವುದೇ ಸರಿ. ಅನೇಕ ಮಕ್ಕಳಾದರೆ ಅವರಲ್ಲಿ ಒಬ್ಬನಾದರೂ ಯೋಗ್ಯನಾಗಿ ಗಯಾಶ್ರಾದ್ಧ್ಯಾದಿಗಳಿಂದ ಪಿತೃಗಳನ್ನುದ್ಧರಿಸಿಯಾನು. ಒಬ್ಬನೇ ಮಗನಾಗಿ ಅವನು ಅಯೋಗ್ಯನಾದರೆ ಪಿತೃಗಳಿಗೆ ಸದ್ಗತಿಯೇ ಇಲ್ಲದಂತಾಗುವುದು ಎಂಬುದಾಗಿ ಬಹುಪುತ್ರ ಪಕ್ಷದಲ್ಲಿ ಯುಕ್ತಿಯನ್ನು ಹೇಳಬಹುದು. ಬಹುಪುತ್ರರನ್ನಪೇಕ್ಷಿಸಬಾರದೆಂಬ ವಿರುದ್ಧ ಪಕ್ಷದಲ್ಲಿಯೂ ಸಹ ಯುಕ್ತಿಯು ದೊರೆಯು ಇದೆ. ಬಹುಮಕ್ಕಳಾದರೆ ಅವರಲ್ಲಿ ಒಬ್ಬನಾದರೂ ಸುರಾಪಾನಾದಿ ಮಹಾಪಾತಕ ಮಾಡುವ ಸಂಭವವಿರುವುದರಿಂದ ಹಾಗೆ ನಡೆದು ಪಿತೃಗಳಿಗೆ ಅಧೋಗತಿಯಾದೀತು! ಆದಕಾರಣ ಬಹುಪುತ್ರರನ್ನಾಶಿಸದಿರುವುದೇ ಮೇಲು. ಹೀಗೆ ವಿರುದ್ಧೋಭಯ ಪಕ್ಷಗಳಿಗೂ ಸಾಧಕಯುಕ್ತಿಗಳು ತೋರುತ್ತಿರುವಾಗ ನಿರ್ಣಯಮಾಡುವ ಬಗೆಯೆಂತು? ಪ್ರತ್ಯಕ್ಷಶಬ್ದಗಳ ವಿರೋಧಾವಿರೋಧಗಳನ್ನು ಲೆಕ್ಕಿಸದೆ ಅದರಂತೆಯೇ ಯುಕ್ತಿಯೂ ಸಹ ಸ್ವತಂತ್ರ ತತ್ವನಿರ್ಧಾರಕವೆಂದು ಹೇಳಿದರೆ ಪ್ರತ್ಯಕ್ಷವಿರುದ್ಧ ವಾದುದನ್ನೂ ಸಹ. ಯುಕ್ತಿಯಿಂದ ಸಾಧಿಸಬಹುದು. ಹೇಗೆಂದರೆ: – ಕೊಂಬಿರುವ ಪಶು, ಕೊಂಬಿಲ್ಲದ ಪಶು ಎಂದು ಪಶುಜಾತಿಯಲ್ಲಿ ಎರಡು ಪಂಗಡವು ಪ್ರತ್ಯಕ್ಷಸಿದ್ಧವಾಗಿದೆ. ಪಶುತ್ವ ಎಂಬ ಧರ್ಮವು ದ್ವಿವಿಧ ಪಶುಗಳಲ್ಲಿಯೂ ಕಂಡಿದೆ. ಪಶುವಾಗಿರುವ ಎಲ್ಲಾ ಪ್ರಾಣಿಗಳಲ್ಲಿಯೂ ಬಾಲ ಮುಂತಾದುವುಗಳಂತೆ ಸಮಾನವಾದ ಅವಯವ ಸನ್ನಿವೇಶಗಳಿರಬೇಕು. ಆದಕಾರಣ ಕೊಂಬಿರುವ ಪಶುಗಳ ದೃಷ್ಟಾಂತದಿಂದ ಪಶುತ್ವವೆಂಬ ಸಮಾನ ಧರ್ಮವನ್ನೇ ನಿಮಿತ್ತ ಮಾಡಿ ಕೊಂಬಿಲ್ಲದ ಪಶುಗಳಲ್ಲಿಯೂ ಕೊಂಬು ಉಂಟೆಂದು ಸಾಧಿಸಿದರೆ ಆ ಯುಕ್ತಿಗೆ ಯಾವ ದೋಷವೂ ಬರುವುದಿಲ್ಲ. ಪ್ರತ್ಯಕ್ಷ ವಿರೋಧವನ್ನು ಹೇಳಬಹುದು. ಪ್ರತ್ಯಕ್ಷದಂತೆ ಯುಕ್ತಿಯೂ ಸ್ವತಂತ್ರ ಸಾಧಕವಾಗಿರುವುದರಿಂದ ಅದರ ವಿರೋಧವು ಅಪ್ರಯೋಜಕವು; ದೋಷವೇ ಅಲ್ಲ. ಹೀಗೆ ಅನುಮಾನ ಮಾತ್ರದಿಂದ ಬಹುವಿರುದ್ದಾರ್ಥಗಳು ಒಪ್ಪಬೇಕಾಗಿ ಬರುತ್ತವೆ. ಆದಕಾರಣ ಇಂತಹ ಸಂದರ್ಭದಲ್ಲಿ ವಿಷಯಸ್ವಭಾವಾನುಸಾರವಾಗಿ ಪ್ರತ್ಯಕ್ಷ ಅಥವಾ ಶಬ್ದ ಪ್ರಮಾಣಗಳ ಸಹಾಯದಿಂದ ಅದಕ್ಕನುಸಾರವಾಗಿರುವ ಯುಕ್ತಿಯೇ ಪ್ರಮಾಣ, ಅದಕ್ಕೆ ವಿರುದ್ಧವಾದುದೆಲ್ಲವೂ ಪ್ರಮಾಣವಲ್ಲವೆಂದು ಭಾವಿಸಿ ತತ್ವವನ್ನು ನಿರ್ಧರಿಸಬೇಕು.

ಹಾಗಾದರೆ ಮನುಷ್ಯನಿಗೆ ಸ್ವತಂತ್ರವಾಗಿ ಒಂದಭಿಪ್ರಾಯವನ್ನು ರೂಪಿಸುವ ಶಕ್ತಿ ಅಥವಾ ಹಕ್ಕು ಇಲ್ಲವೇ? ಎಂಬ ಪ್ರಶ್ನೆ ಏಳಬಹುದು. ಸ್ವತಂತ್ರ ವಿಚಾರವನ್ನೇ ನಾವು ಅಲ್ಲಗಳೆಯುವುದಿಲ್ಲ; ಆದರೆ ಅವರು ತಮ್ಮ ವಿಚಾರದಿಂದ ನಿರ್ಧರಿಸಿದ ತತ್ವವು ಪ್ರಮಾಣಸಮ್ಮತವೇ? ಅಲ್ಲವೇ? ಎಂಬುದನ್ನು ವಿವೇಚನೆಮಾಡಿ ಪ್ರಮಾಣ ಸಮ್ಮತವಾದ ನಿರ್ಧಾರವನ್ನು ಕೈಗೊಳ್ಳಬೇಕೆಂದು ಸಲಹೆ ಮಾಡುತ್ತೇವೆ.

ಸಂಪ್ರದಾಯ

ಕೆಲವು ಆಧುನಿಕರು ಯುಕ್ತಿಯಿಂದಲೇ ಸಕಲ ತತ್ವವನ್ನೂ ನಿರ್ಧರಿಸುತ್ತೇವೆಂದು ಪ್ರತಿಜ್ಞೆ ಮಾಡುವರು. ಅದು ಸಾಧ್ಯವಲ್ಲ. ಪ್ರತಿಯೊಂದು ದರ್ಶನದಲ್ಲಿಯೂ (Philosophy) ನಡೆನುಡಿಗಳಲ್ಲಿಯೂ ಸಹ ಮೂಲಭೂತವಾದ ಕೆಲವಂಶಗಳನ್ನು ಸಾಂಪ್ರದಾಯಿಕವಾಗಿ ಒಪ್ಪಿಯೇ ತೀರಬೇಕು, ಭಾಷಾಶಾಸ್ತ್ರವನ್ನು ನೋಡಿದರೆ ಇಂಗ್ಲಿಷ್ ಭಾಷೆಯಲ್ಲಿ Hour-ಅವರ್ ಮುಂತಾದ ಅನೇಕ ಶಬ್ದಗಳಲ್ಲಿ H ಮುಂತಾದ ಅಕ್ಷರಗಳಿಗೆ ಉಚ್ಚಾರಣೆಯೇ ಇಲ್ಲ. ನಿಷ್ಪಲವಾದ ಆ ವರ್ಣಗಳನ್ನೇಕೆ ಸೇರಿಸಬೇಕು? ಎಂಬ ಆಕ್ಷೇಪಕ್ಕೆ ಸಂಪ್ರದಾಯವೇ ಶರಣವು. ಇಂಗ್ಲೀಷರ ಮಾಸವ್ಯವಸ್ಥೆಯಲ್ಲಿ ಒಂದೊಂದು ತಿಂಗಳಿಗೂ ದಿನಪರಿಮಿತಿಯಲ್ಲಿ ವ್ಯತ್ಯಾಸವಿದೆ. ಎಲ್ಲಾ ತಿಂಗಳಿಗೂ ಒಂದೇ ವಿಧವಾಗಿ 30 ದಿನಗಳನ್ನೇಕೆ ಅಳವಡಿಸಲಿಲ್ಲ? ಅದರಲ್ಲಿಯೂ ನವಂಬರಿಗೆ 30, ಡಿಸೆಂಬರ್ ತಿಂಗಳಿಗೆ 31 ಎಂಬ ನಿಯಮವೇಕೆ? ವಿಪರೀತವಾಗಿ ಏಕೆ ಹೇಳಬಾರದು ? ಜುಲೈ-ಆಗಸ್ಟ್ ಈ ಎರಡು ತಿಂಗಳಿಗೂ 31 ದಿನಗಳೇಕೆ? ಫೆಬ್ರವರಿಗೆ 28 ಅಥವಾ 29 ಎಂಬ ವಿಕಲ್ಪವೇಕೆ? ಇತ್ಯಾದಿ ಆಕ್ಷೇಪಗಳಿಗೆಲ್ಲಾ ಸಂಪ್ರದಾಯವೆನ್ನುವುದೊಂದೇ ಉತ್ತರ. ಬೇರಾವ ಕಾರಣದಿಂದಲೂ ಈ ವ್ಯವಸ್ಥೆಯನ್ನು ಸಮರ್ಥಿಸಲಾಗುವುದಿಲ್ಲ. ಹೀಗೆ ಸಾಧಾರಣ ನಡೆನುಡಿಗಳಲ್ಲಿಯೇ ಸಂಪ್ರದಾಯವನ್ನು ಬಿಡಲಾಗದಿದ್ದ ಮೇಲೆ ಅತೀಂದ್ರಿಯಾರ್ಥ ವ್ಯವಸ್ಥಾಪಕವಾದ ತತ್ವಶಾಸ್ತ್ರದಲ್ಲಿ ಸಂಪ್ರದಾಯದಿಂದ ಕೆಲವು ತತ್ವನಿರ್ಧಾರವನ್ನು ಕೈಕೊಳ್ಳದಿರಲು ಸಾಧ್ಯವೇ? ಎಂಬುದನ್ನು ಗಮನಿಸಬೇಕು. ನಾವು ಎಷ್ಟೇ ಬುದ್ಧಿವಂತರೆಂದು ತಿಳಿದಿದ್ದರೂ ಸಂಪ್ರದಾಯವನ್ನು ಕಲ್ಪಿಸಿದ ಪೂರ್ವಾಚಾರ್ಯರ ಬುದ್ಧಿ ಶಕ್ತಿಯು ಹೆಚ್ಚಿನದೆಂಬುದನ್ನು ಮರೆಯಬಾರದು. ಅವರ ಬುದ್ಧಿಗೂ ನಿಲುಕದ ಅಲೌಕಿಕ ಪ್ರಭೆಯಿಂದ ಸ್ಪುರಿಸಿದ ತತ್ವಗಳೇ ಸಾಂಪ್ರದಾಯಿಕಗಳು. ಅವು ನಮ್ಮಂತಹ ಅಲ್ಪಜ್ಞರ ಊಹೆಗೂ ನಿಲುಕಲಾರವು. ಆದುದರಿಂದ ಸಂಪ್ರದಾಯವನ್ನು ಬಿಟ್ಟು, ಯುಕ್ತಿ ಮಾತ್ರದಿಂದಲೇ ತತ್ವನಿರ್ಧಾರಣೆ ಮಾಡುತ್ತೇವೆಂಬುದು ಮೌಡ್ಯವೇ ಸರಿ.

ವಿಚಾರ ಮಾರ್ಗ

ಅಂತಹ ಅಲೌಕಿಕತತ್ವ ವಿಷಯದಲ್ಲಿ ವೇದ, ಉಪನಿಷತ್ತು ಮುಂತಾದ ಅಪೌರುಷೇಯಗ್ರಂಥಗಳು ಮತ್ತು ಸರ್ವಜ್ಞ ರಚಿತವಾದ ಗೀತಾದಿಗ್ರಂಥಗಳು ಮಾತ್ರವೇ ಪ್ರಮಾಣವು. ಪ್ರಮಾಣವಿಲ್ಲದೆ ಯಾವ ತತ್ವನಿರ್ಧಾರವನ್ನೂ ಕೈಗೊಳ್ಳಬಾರದು, ಈ ಪಂಥವನ್ನನುಸರಿಸಿರುವುದೇ ತತ್ವವಿಚಾರಮಾರ್ಗವು.

ಕೇವಲ ಯುಕ್ತಿವಾದ ಅಥವಾ ಪ್ರಮಾಣರಹಿತ ತತ್ವಕಥನೆ ಇವು ತತ್ವವಿಚಾರಮಾರ್ಗವಲ್ಲವೆಂಬುದನ್ನು ಮನದಲ್ಲಿಟ್ಟು ಪ್ರಮಾಣಗಳ ಆಧಾರದ ಮೇಲೆ ಸಂಸ್ಕೃತ ಬುದ್ಧಿಯಿಂದ ವಿಮರ್ಶೆ ಮಾಡಿ ತತ್ವವನ್ನು ನಿರ್ಧರಿಸುವಂತಹ ರೀತಿಯೇ ಸ್ವತಂತ್ರ ವಿಚಾರಮಾರ್ಗವು, ಅಂತಹುದನ್ನು ನಾವು ಸ್ವಾಗತಿಸುವೆವು. ಅಂತಹ ಸುವ್ಯವಸ್ಥಿತ ರೀತಿಯನ್ನೇ ಅವಲಂಬಿಸಿ ಪೂರ್ವಾಚಾರ್ಯರು ತತ್ವನಿರ್ಧಾರಣೆ ಮಾಡಿರುವರು. ಹಾಗಲ್ಲದೆ ಕುಯುಕ್ತಿ ಮಾತ್ರಶರಣರಾಗಿ ಯಾವುದೊಂದು ಮೂಲತತ್ವ ನಿರ್ಧಾರವೂ ಇಲ್ಲದೆ ಪೂರ್ವ ಪದ್ಧತಿಯನ್ನಲ್ಲಗಳೆಯುತ್ತಾ ಸಮಯ ಬಂದ ಹಾಗೆಲ್ಲಾ ತಮ್ಮ ರೀತಿ ನೀತಿಗಳನ್ನು ಬದಲಾಯಿಸಿಕೊಂಡು ಅಸಂಸ್ಕೃತವಾದ ತಮ್ಮ ಮನ ಬಂದಂತೆ ಹೇಳುವವರ ವಾದದಲ್ಲಿ ತಿರುಳಿಲ್ಲ. ಅದು ಎಂದಿಗೂ ತತ್ವ ವ್ಯವಸ್ಥಾಪಕವಾಗಲಾರದು, ಅಂತಹ ಸ್ವತಂತ್ರ ಮಾರ್ಗವೇ ಉಪಾದೇಯವಲ್ಲವೆಂದು ವಿಮರ್ಶಕರ ಅಭಿಪ್ರಾಯ,

ಅರ್ಥಕ್ರಮ

ಗೀತೆಯು ಸರ್ವಾಧಿಕಾರಿಕವಾದ ತತ್ವಶಾಸ್ತ್ರವು. ಅದು ಬಹು ಗೂಢಾರ್ಥವುಳ್ಳದಾಗಿ ಗಂಭೀರವಾಗಿದೆ. ಅದರ ಆಳವನ್ನು ಕಾಣುವುದು ಸುಲಭವಲ್ಲ. ಅದಕ್ಕೆ ಭಾಷ್ಯ ಟೀಕೆಗಳು ಮತ್ತು ಭಾಷಾಂತರಗಳು ಹೇರಳವಾಗಿವೆ. ಆದರೆ ಅದರ ನೈಜವಾದ ಅರ್ಥವು ಎಷ್ಟರಮಟ್ಟಿಗೆ ಹೊರಬಿದ್ಧಿದೆಯೆಂಬುದೇ ಸಮಸ್ಯೆಯು. ಶಾಸ್ತ್ರದ ನೈಜವಾದ ಆಶಯವನ್ನು ಕಂಡುಹಿಡಿಯಬೇಕಾದರೆ ಉಪಕ್ರಮ, ಉಪಸಂಹಾರ, ಆಭ್ಯಾಸ, ಅಪೂರ್ವತೆ, ಫಲ ಮತ್ತು ಅರ್ಥವಾದ ಎಂಬ ಆರು ಯುಕ್ತಿಗಳ ಬಲಾಬಲವಿವೇಚನೆ ಮಾಡಿ ಅರ್ಥವನ್ನು ನಿರ್ಣಯಿಸಬೇಕು. ಉಪಕ್ರಮವೆಂದರೆ “ಪ್ರಕೃತವಾಕ್ಯವಿರುವ ಪ್ರಕರಣದ ಆದಿಭಾಗವು, ಕೊನೆಯ ಭಾಗವೇ ಉಪಸಂಹಾರವು. ಒಂದೇ ವಿಧವಾಗಿ ಅನೇಕ ಸ್ಥಳಗಳಲ್ಲಿ ಹೇಳಿರುವುದಕ್ಕೆ ಅಭ್ಯಾಸವೆಂದು ಹೆಸರು. ಬೇರೇ ಪ್ರಮಾಣಗಳಿಂದ ಸಿದ್ಧಿಸದಿರುವುದು ಅಪೂರ್ವತೆಯು, ಅರ್ಥಜ್ಞಾನದಿಂದಾಗುವ ಪ್ರಯೋಜನವೇ ಫಲವು. ಸ್ತುತಿನಿಂದೆಗಳು ಅರ್ಥವಾದವು. ವಾಕ್ಯದಿಂದ ವಿರುದ್ಧವಾದ ಎರಡು ಅರ್ಥಗಳು ತೋರಿಬಂದಾಗ ಈ ಆರು ಸಾಧನೆಗಳಿಗೂ ಅನುಕೂಲವಾಗಿರುವುದೇ ಆ ವಾಕ್ಯದ ನಿಜಾರ್ಥವೆಂದು ನಿರ್ಧರಿಸಬೇಕು. ವಿಚಾರ ಶಾಸ್ತ್ರದಲ್ಲೆಲ್ಲಾ ಪ್ರಾಚೀನಾಚಾರ್ಯರು, ಲೌಕಿಕ ವ್ಯವಹಾರದಲ್ಲಿ ಪ್ರಾಜ್ಞರೂ ಸಹ ಇದೇ ಕ್ರಮವನ್ನು ಅನುಸರಿಸಿರುತ್ತಾರೆ.

ಭಾಷಾಂತರ

ಗೀತೆಗೆ ಭಾಷ್ಯ ಟೀಕೆಗಳು ಮತ್ತು ಭಾಷಾಂತರಗಳೂ ಸಹ ಹೇರಳವಾಗಿವೆ. ಆದರೆ ಮೇಲೆ ಹೇಳಿದ ತಾತ್ಪರ್ಯನಿರ್ಣಾಯಕ ಸಾಧನಗಳ ಕಡೆಗೆ ಗಮನ ಕೊಡದೆ ತಮ್ಮದೇ ಆದ ಸಿದ್ದಾಂತಾರ್ಥವನ್ನು ಗೀತೆಯ ಮೇಲೆ ಹೊರಿಸಿರುವವರು ಕೆಲವರು. ಇನ್ನು ಕೆಲವರು ತಮ್ಮ ಅಭಿಮತಾರ್ಥವನ್ನೇ ಉಪಕ್ರಮಾದಿಗಳಿಗನುಗುಣವೆಂದು ಆಪಾತಯುಕ್ತಿಗಳಿಂದ ನಿರೂಪಿಸಿ ಅದನ್ನೆ ಗೀತಾರ್ಥವೆಂದು ಸಾರಿರುವರು. ಭಾಷಾಂತರಗಳಂತೂ ಪ್ರಾಯಶಃ ಕಟ್ಟುಹರಿದ ಪಂಜಿನಂತೆ ಬೆಳಗುತ್ತಿವೆ. ಭಾಷಾಂತರಕರ್ತರಲ್ಲೆಲ್ಲಾ ಹಿರಿಯರು ಲೋಕಮಾನ್ಯ ಬಾಲಗಂಗಾಧರ ತಿಲಕರು. ಅವರು ಲೌಕಿಕ ವ್ಯವಹಾರದಲ್ಲಿ ನಿಪುಣರು; ಅಲ್ಲದೆ ಶಾಸ್ತ್ರ ವ್ಯಾಸಂಗವನ್ನೂ ಮಾಡಿದವರು. ಅವರು ತಮ್ಮ ಸಂಸ್ಕೃತ ಬುದ್ಧಿಯಿಂದಲೂ, ಕೆಲವು ಶಾಸ್ತ್ರಾಧಾರಗಳಿಂದಲೂ ಪರಿಶೀಲನೆ ಮಾಡಿ ಗೀತಾರಹಸ್ಯವೆಂಬ ಹೆಸರಿನಿಂದ ಮರಾಠಿ ಭಾಷೆಯಲ್ಲಿ ಗೀತೆಗೆ ಭಾಷಾಂತರವನ್ನು ಬರೆದಿರುವರು ಅಂತಹವರೂ ಸಹ ಮತಸ್ಥಾಪಕರಾದ – ಪೂರ್ವಾಚಾರ್ಯರು ಸ್ವತಂತ್ರ ಪರಿಶೀಲನೆಯಿಲ್ಲದೆ ಸಾಂಪ್ರದಾಯಿಕ ಆಗ್ರಹಕ್ಕೆ ಕಟ್ಟು ಬಿದ್ದು ಅದಕ್ಕನುಗುಣವಾಗಿ ಗೀತೆಗೆ ವ್ಯಾಖ್ಯಾನಮಾಡಿರುವರೆಂಬ ಆಕ್ಷೇಪವನ್ನೆತ್ತಿ ವಿಮರ್ಶಾತ್ಮಕವಾದ ಸ್ವತಂತ್ರದೃಷ್ಟಿಯಿಂದ ತಾವು ಗೀತೆಗೆ ನಿಜವಾದ ಅರ್ಥವನ್ನು ಹೇಳುತ್ತೇವೆಂದು ಉದ್ಘೋಷಿಸಿ ಗೀತೆಯು ಪ್ರವೃತ್ತಿಧರ್ಮಪರವೆಂದು ಹೇಳಿ ಎಡವಿರುತ್ತಾರೆ. ಅಷ್ಟೇ ಅಲ್ಲದೆ ‘ಸ್ವಕೀಯರೊಡನೆ ಯುದ್ಧ ಮಾಡುವುದು ಕುಕರ್ಮವೆಂಬ ಕಾರಣದಿಂದ ಖಿನ್ನ ಮನಸ್ಕನಾದ ಅರ್ಜುನನನ್ನು ಯುದ್ಧ ಪ್ರವರ್ತನೆ ಮಾಡಿಸುವುದಕ್ಕಾಗಿ ಹೇಳಲ್ಪಟ್ಟ ಗೀತೆಯಂಥ ಪುಸ್ತಕದಲ್ಲಿ ಬ್ರಹ್ಮಜ್ಞಾನದಿಂದ ಅಥವಾ ಭಕ್ತಿಯಿಂದ ಮೋಕ್ಷವನ್ನು ಹೇಗೆ ಪಡೆಯಬೇಕೆಂಬುದನ್ನು ಅಂದರೆ ಮೋಕ್ಷಮಾರ್ಗವನ್ನು ವಿವೇಚಿಸುವುದಕ್ಕೆ ಕಾರಣವೇನು?’ ಎಂಬ ಸಂದೇಹವು ಹುಟ್ಟಿತೆಂತಲೂ ಅದಕ್ಕೆ ಯಾವ ಪೂರ್ವಾಚಾರ್ಯರ ಟೀಕೆಯಿಂದಲೂ (ಸಮಾಧಾನವಾಗಲಿಲ್ಲವೆಂತಲೂ ಆಕ್ಷೇಪವೆತ್ತಿರುವರು. ಅವರು ಶ್ರೀ ಮಧ್ವಾಚಾರ್ಯರ ಭಾಷ್ಯಾದಿಗಳನ್ನು ನೋಡಿದ್ಧರೆ ಈ ಆಕ್ಷೇಪವೇ ತಲೆದೋರುತ್ತಿರಲಿಲ್ಲ. ಹೇಗೆಂದರೆ:- ಅರ್ಜುನ! ಯುದ್ಧವು ಅಧರ್ಮವೆಂಬ ಶಂಕೆಯನ್ನು ಬಿಡು. ಅದು ಕ್ಷತ್ರಿಯನಾದ ನಿನಗೆ ಪರಮಾತ್ಮನಿಂದ ವಿಧಿಸಲ್ಪಟ್ಟ ಕರ್ತವ್ಯಧರ್ಮವು, ನೀನು ಅದನ್ನು ಮಾಡದಿದ್ದರೆ ಕರ್ತವ್ಯಭ್ರಷ್ಟನಾಗುವೆ. ಯುದ್ಧ ಮಾಡುವುದರಲ್ಲಿಯೂ ವಿಹಿತರೀತಿಯನ್ನನುಸರಿಸಬೇಕು. ಭಗವಂತನ ಮಾಹಾತ್ಮಯನ್ನರಿತು ಅವನಲ್ಲಿ ಭಕ್ತಿಯನ್ನಿಟ್ಟು ನಾನು ಮಾಡುವ ಯುದ್ಧವು ನಿನಗೇ ಅರ್ಪಿತವಾಗಲಿ, ಎಂಬ ಅನುಸಂಧಾನದಿಂದ ಫಲಾಕಾಂಕ್ಷೆಯನ್ನು ಬಿಟ್ಟು ಕರ್ತವ್ಯಧರ್ಮವನ್ನಾಚರಿಸುವುದೇ ವಿಹಿತರೀತಿಯು. ಈ ರೀತಿಯಿಂದ ಮಾಡಿದ ವಿಹಿತಾಚರಣೆಯು ಇಹದಲ್ಲಿ ಮಾತ್ರವೇ ಶ್ರೇಯಸ್ಕರವೆಂದಲ್ಲ; ಇಹದಲ್ಲಿ ಶ್ರೇಯಸ್ಸನ್ನುಂಟುಮಾಡಿ ಜ್ಞಾನದ್ವಾರಾ ಮೋಕ್ಷಕ್ಕೂ ದಾರಿಯಾಗುವುದು. ಆದುದರಿಂದ ಕರ್ತವ್ಯ ಯುದ್ಧವನ್ನು ನಿರಾತಂಕವಾಗಿ ಮಾಡು; ಮಾಡದಿರುವುದು ಅಧರ್ಮವು. ಅದಕ್ಕೆಡೆಗೊಡಬೇಡ ಎಂಬುದೇ ಗೀತೋಪದೇಶದ ಸಾರವೆಂದು ಶ್ರೀಮಧ್ವಾಚಾರ್ಯರು ನಿರೂಪಿಸಿರುವರು, ಈ ಸಾರಾಂಶವನ್ನು ತಿಳಿದ ಬಳಿಕ ತಿಲಕರ ಆಕ್ಷೇಪಕ್ಕೆ ಅವಕಾಶವಿದೆಯೇ? ಯುದ್ಧವು ಅಧರ್ಮವು ಅದರಿಂದ ಇಹದಲ್ಲಿ ಸುಖಹಾನಿ ದುಃಖಗಳೂ, ಪರಲೋಕದಲ್ಲಿ ನರಕಾದ್ಯನರ್ಥವೂ ಆಗುತ್ತದೆಂದು ಶಂಕಿಸಿದ ಅರ್ಜುನನಿಗೆ ಆದೇ ಪರಮಧರ್ಮವೆಂಬುದನ್ನು ತೋರಿಸಿ, ಅದು ಯಾವ ರೀತಿಯಲ್ಲಿ ಮಾಡಿದರೆ ಇಹದಲ್ಲಿ ಸುಖಪ್ರದವಾಗಿ ಮೋಕ್ಷಮಾರ್ಗವಾಗುವುದೋ ಅಂತಹ ರೀತಿಯನ್ನು ಬೋಧಿಸಿ ಗೀತೆಯು ನಿವೃತ್ತಧರ್ಮಪರ ಎಂಬುದನ್ನು ತೋರಿಸಿಕೊಟ್ಟಿರುವರು. ಮಹಾತ್ಮಾ ಗಾಂಧಿಜೀಯವರೂ ಸಹ ಈ ಮಾರ್ಗವನ್ನೇ ಅವಲಂಬಿಸಿರುವರು. ಇಲ್ಲಿ ನಿರೂಪಿಸಿರುವ ನಿವೃತಧರ್ಮವೇ ಅವರು ಹೇಳಿರುವ ಅನಾಸಕ್ತಿಯೋಗವು, ಫಲದಲ್ಲಾಸಕ್ತನಾಗದೇ ಭಗವತ್ಪ್ರೀತ್ಯರ್ಥವಾಗಿ ಮಾಡುವ ಕರ್ಮವೇ ಅನಾಸಕ್ತಿ ಯೋಗವೆಂದು ಅವರೇ ವಿವರಿಸಿ ಅದೇ ಗೀತೋಕ್ತ ಕರ್ಮಯೋಗವೆಂದು ಸಾರಿರುವರು. ಈ ಅಂಶವು ಒಪ್ಪತಕ್ಕುದೇ ಸರಿ.

ಪರಮ ಪವಿತ್ರವಾದ ಗೀತೆಯಲ್ಲಿ ಇಂತಹ ಉತ್ಕೃಷ್ಟವಾದ ಉಪದೇಶವು ಯುಕ್ತವೋ? ಅಲ್ಪ ಪ್ರಯೋಜನಕಾರಿಯಾಗಿರುವುದರಿಂದ ಸರ್ವರಿಗೂ ಉಪಾದೇಯವಾಗದಿರುವಂತಹ ಪ್ರವೃತ್ತಿಧರ್ಮಪರವಾಗಿ ಗೀತೆಯನ್ನು ಯೋಜನೆಮಾಡುವುದುಚಿತವೋ? ವಾಚಕರೇ ನಿರ್ಧರಿಸಬಹುದು. ಹೀಗೆ ತಿಲಕರಂತಹ ದೊಡ್ಡವರ ಬುದ್ಧಿಗೇ ತತ್ವವು ಯಥಾವತ್ತಾಗಿ ಗೋಚರಿಸದಿರುವಾಗ ಇತರ ಸಾಮಾನ್ಯ ಜನರ ಪಾಡೇನು?

ಕೆಲವು ಭಾಷಾಂತರಗಳಂತೂ ನಿರಂಕುಶವಾಗಿ ಸಾಗುತ್ತಿವೆ. ಮೂಲದಲ್ಲಿ ಏನೇ ಇರಲಿ: ಆದಕ್ಕೆ ತಮ್ಮ ಮನಬಂದ ಅರ್ಥವನ್ನೇ ಪ್ರತಿಪಾದಿಸುತ್ತಾರೆ. ಶಬ್ದಸ್ವಾರಸ್ಯ, ಸಂದರ್ಭಾದಿಗಳನ್ನು ಲೆಕ್ಕಿಸುವುದಿಲ್ಲ. ಲೌಕಿಕವ್ಯವಹಾರದಲ್ಲಿ ಉಪಯೋಗಿಸುವ ರಾಷ್ಟ್ರೀಯತೆ ಮುಂತಾದ ಹಲವು ಆಧುನಿಕ ಸಂಕೇತಗಳನ್ನು ಗೀತೋಕ್ತ, ವೇದೋಕ್ತ ಇತ್ಯಾದಿ ರೀತಿಯಾಗಿ ಮನಬಂದಂತೆ ಪ್ರತಿಪಾದಿಸಿರುವರು. ಶ್ರೀ ಆಲೂರು ವೆಂಕಟರಾಯರು ಬರೆದಿರುವ ಗೀತಾಭಾವಪ್ರದೀಪ ಎಂಬ ಪುಸ್ತಕದಲ್ಲಿ ಗೀತೆಯೂ-ರಾಷ್ಟ್ರೀಯತ್ವವೂ ಎಂದು ಪ್ರಾರಂಭಿಸಿ, ವೇದದಲ್ಲಿಯೂ ರಾಷ್ಟ್ರೀಯತ್ವದ ಕಲ್ಪನೆಯಿದೆಯೆಂದು ಹೇಳಿ ಅದಕ್ಕೆ ‘ಅಹಂ ರಾಷ್ಟ್ರ ಸಂಗಮನೀ’‘ ಇತ್ಯಾದಿ ಋಗ್ವೇದದಲ್ಲಿನ ಅಂಭ್ರಣೀ ಸೂಕ್ಷವಾಕ್ಯವನ್ನುದಾಹರಿಸಿ ಅಲ್ಲಿನ ‘ರಾಷ್ಟ್ರೀ’ ಶಬ್ದವು ರಾಷ್ಟ್ರೀಯತ್ವ ಕಲ್ಪಕವೆಂದು ಹೇಳಿದ್ದಾರೆ. ರಾಷ್ಟ್ರೀಯತ್ವ ಎಂದರೆ ಹಿಂದುಸ್ತಾನವು ಒಂದು ಎಂಬ ಕಲ್ಪನೆಯೆಂದು ಅವರೇ ವಿವರಿಸಿದ್ದಾರೆ. ಈ ಕಲ್ಪನೆಗೂ ವೇದದಲ್ಲಿನ ‘ರಾಷ್ಟ್ರೀ’ ಶಬ್ದಕ್ಕೂ ಗಂಟುಹಾಕಿರುವುದು ಹಾಸ್ಯಾಸ್ಪದವಲ್ಲವೇ? ವಾಚಕರೇ ನಿರ್ಣಯಿಸಲಿ ಅದೇ ಪುಸ್ತಕದಲ್ಲಿ ಮುಂದುವರೆದು ‘ನನ್ನದು’ ಎಂಬ ಕಲ್ಪನೆಯೇ ಅಹಂಕಾರವೆಂದು ಹೇಳಿರುವರು. ‘ನಾನು’ ಎಂಬುದು ಅಹಂಕಾರ, ‘ನನ್ನದು’ ಎಂಬುದು ಮಮಕಾರ ಎಂಬುದು ಸ್ಪುಟವಾಗಿದೆ. ಹೀಗೆ ವಿವೇಚನೆಯಿಲ್ಲದ ಅಸಂಗತ ಲೇಖನಗಳು ಹೇರಳವಾಗಿದ್ದರೂ ಪ್ರಾಜ್ಞರಾದ ಹಳೆಯ ಪಂಡಿತರನ್ನು, ಸಂಪ್ರದಾಯವನ್ನೂ ಸಹ ತೆಗಳುವುದು ಅವರಿಗೆ ಪಲ್ಲವಿಯಾಗಿದೆ.

ಗೀತೆಯ ತತ್ವಾರ್ಥವನ್ನು ತೋರಿಸುವುದೇ ನಮ್ಮ ಉದ್ದೇಶವು. ಆಧುನಿಕ ಗ್ರಂಥಗಳ ಪರಿಸ್ಥಿತಿಯನ್ನು ಕಲಕುವ ಉದ್ದೇಶವಿಲ್ಲ. ಆದರೆ ಜನರು ಅಂತಹ ಪುಸ್ತಕಗಳನ್ನು ನೋಡಿ ತತ್ವ ವಿಷಯದಲ್ಲಿ ವಿಪರೀತಜ್ಞಾನಿಗಳಾಗದಿರಲೆಂಬ ಭಾವನೆಯಿಂದ ಒಂದೆರಡಂಶವನ್ನು ಮಾತ್ರ ಇಲ್ಲಿ ವಿವರಿಸಬೇಕಾಯಿತು.

ಗೀತೆಯೂ ತತ್ವಶಾಸ್ತ್ರವೂ

‘ಮಾನಾಧೀನಾ ಮೇಯಸಿದ್ಧಿಃ’ ಎಂಬ ಸೂಕ್ತಿಯಂತೆ ಪ್ರಮಾಣಗಳಿಂದ ತತ್ವವನ್ನು ನಿರ್ಣಯಿಸುವ ಶಾಸ್ತ್ರವೇ ತತ್ವಶಾಸ್ತ್ರವು. ಅದು ಆಸ್ತಿಕ ದರ್ಶನ ಮತ್ತು ನಾಸ್ತಿಕ ದರ್ಶನ ಎಂದು ಎರಡು ಬಗೆಯಾಗಿದೆ. ಆಯಾಯ ದರ್ಶನ ಪ್ರವರ್ತಕರು ತಮ್ಮ ತತ್ವ ನಿರೂಪಣೆಗೆ ಪೂರ್ವಭಾವಿಯಾಗಿ ಮೂಲಾಧಾರವಾದ ಪ್ರಮಾಣ ತತ್ವವನ್ನು ವಿವೇಚನೆಮಾಡಿ ತಮಗಭಿಮತ ಪ್ರಮಾಣಗಳನ್ನು ನಿರ್ಧರಿಸಿ ಅದರಿಂದ ತತ್ವ ನಿರ್ಧಾರಣೆ ಮಾಡಿರುವರು.

ನಾಸ್ತಿಕರಲ್ಲಿ ಚಾರ್ವಾಕರು ಪ್ರತ್ಯಕ್ಷವೊಂದೇ ಪ್ರಮಾಣವು, ಅದಕ್ಕೆ ಗೋಚರಿಸುವ ಭೌತಿಕ ವಸ್ತುಗಳೇ ತತ್ವವು, ಇಂದ್ರಿಯಗೋಚರವಲ್ಲದ ಧರ್ಮ, ಅಧರ್ಮ, ಸ್ವರ್ಗ, ನರಕ, ಜಗದಾದಿ ಕರ್ತನಾದ ಪರಮಾತ್ಮ ಮುಂತಾದ ಅಲೌಕಿಕ ವಸ್ತುವೇ ಇಲ್ಲವೆಂದೂ ಅಭಿಪ್ರಾಯಪಡುತ್ತಾರೆ. ಬೌದ್ಧರು ಪ್ರತ್ಯಕ್ಷ, ಅನುಮಾನವೆಂಬ ಎರಡು ಪ್ರಮಾಣಗಳನ್ನoಗೀಕರಿಸಿ ಅವುಗಳಿಂದ ಸಿದ್ಧವಾಗುವ ಧರ್ಮಾಧರ್ಮಾದಿ ಕೆಲವು ಅತೀಂದ್ರಿಯ ವಸ್ತುಗಳನ್ನೂ ಒಪ್ಪಿರುವರು. ಅವರು ವೇದಾದಿಗಳನ್ನು ಪ್ರಮಾಣವೆನ್ನುವುದಿಲ್ಲ. ಜಗತ್ತೆಲ್ಲವೂ ಕ್ಷಣಿಕವೆನ್ನುವರು. ಅವರಲ್ಲಿಯೂ ಕೆಲವರು ಈ ಜಗತ್ತು ಶೂನ್ಯವೆಂದೂ, ಹಲವರು ವಿಜ್ಞಾನರೂಪವೆಂತಲೂ ಒಪ್ಪಿರುವರು. ಹಾಗಾದರೆ ಬಾಹ್ಯ ಜಗತ್ತು ಸತ್ತಾಗಿ ತೋರಲು ಕಾರಣವೇನೆಂದರೆ : – ಸಂವೃತಿ ಎಂಬ ಮಾಯಾಶಕ್ತಿಯು ಶೂನ್ಯವನ್ನು ಸತ್ತಾಗಿ ತೋರಿಸುತ್ತದೆ. ಅದನ್ನು ಸಾಂವೃತ ಸತ್ಯವೆನ್ನುವರು. ಅದು ಪರಮಾರ್ಥ ಸತ್ತಲ್ಲ. ಅದರಿಂದಲೇ ಪ್ರಪಂಚವ್ಯವಹಾರವೆಲ್ಲವೂ ನಡೆಯುತ್ತದೆ. ಶೂನ್ಯವೇ ಪರಮಾರ್ಥವು ಇತ್ಯಾದಿಯಾಗಿ ಅವೈದಿಕ ಸಿದ್ದಾಂತವನ್ನು ಪ್ರಚಾರಮಾಡಿರುತ್ತಾರೆ.

ಗೀತೆಯ ಅರ್ಥವನ್ನು ನಿರೂಪಿಸುವಾಗ ಗೀತೆಯನ್ನೇ ಪ್ರಮಾಣವೆಂದು ಒಪ್ಪದಿರುವ ದರ್ಶನಗಳ ವಿಚಾರವು ಅಪ್ರಕೃತ. ಸಾ೦ಖ್ಯದರ್ಶನವೂ ಅದೇ ಶ್ರೇಣಿಗೆ ಸೇರಿದೆ. ಉಳಿದ ನ್ಯಾಯವೈಶೇಷಿಕ, ಪೂರ್ವಮೀಮಾಂಸಾ, ಉತ್ತರಮೀಮಾಂಸಾ (ವೇದಾಂತ) ದರ್ಶನಗಳನ್ನು ಪರಿಶೀಲಿಸಿದರೆ ಗೀತೆಯು ತಮ್ಮ ತಮ್ಮ ಸಿದ್ಧಾಂತಕ್ಕೆ ಅನುಕೂಲವಾಗಿದೆಯೆಂದು ಆಯಾಯಾ ದಾರ್ಶನಿಕರ ಅಭಿಪ್ರಾಯವಿದೆ.

ಗೀತೆಯು ಅಧ್ಯಾತ್ಮಶಾಸ್ತ್ರವು. ಮುಖ್ಯವಾಗಿ ಅತ್ಮತತ್ವವನ್ನು ವಿವೇಚನೆ ಮಾಡಿ ಜೀವಾತ್ಮರ ಶ್ರೇಯೋಮಾರ್ಗವನ್ನು ನಿರ್ಧರಿಸಿ ಹೇಳಲು ಪ್ರವೃತ್ತವಾದುದು. ಚಾರ್ವಾಕದರ್ಶನದಲ್ಲಿ ಶರೀರಕ್ಕಿಂತ ಬೇರೆಯಾದ ಆತ್ಮನೇ ಇಲ್ಲದಿರುವುದರಿಂದ ಅಧ್ಯಾತ್ಮವಿಚಾರಸಂದರ್ಭದಲ್ಲಿ ಅದನ್ನು ಗಣನೆಗೆ ತರುವುದುಚಿತವಲ್ಲ. ಉಳಿದ ಸಾಂಖ್ಯ, ನ್ಯಾಯವೈಶೇಷಿಕ, ಪೂರ್ವಮೀಮಾಂಸಾ, ವೇದಾಂತ ಇವುಗಳಲ್ಲಿನ ಆತ್ಮ ತತ್ವವಿಚಾರಮಾಡುವುದು ಸಂದರ್ಭಾನುಗುಣವು. ವೇದಾಂತದಲ್ಲಿಯೂ ಅದೈತ, ವಿಶಿಷ್ಟಾದ್ವೈತ, ದೈತ ಎಂದು ಮೂರು ಸಿದ್ಧಾಂತಗಳು ಪ್ರಚಾರದಲ್ಲಿವೆ. ಸಾಂಖ್ಯ ನ್ಯಾಯವೈಶೇಷಿಕ, ಪೂರ್ವಮೀಮಾಂಸಾ, ಮೂರು ವೇದಾಂತಗಳು ಎಂಬೀ ಆರು ದರ್ಶನಗಳ ಪೈಕಿ ಆದ್ವೈತವೊಂದನ್ನುಳಿದು ಐದು ದರ್ಶನಗಳೂ ಒಂದೇ ವಿಧವಾದ ಸತ್ಯತ್ವವುಳ್ಳ ಅನೇಕ ತತ್ವಗಳನ್ನೊಪ್ಪಿ ಅನೇಕಾತ್ಮವಾದವನ್ನೇ ಎತ್ತಿ ಹಿಡಿದಿವೆ.

ಅದ್ವೈತ ದರ್ಶನದಲ್ಲಿ ‘ತತ್ವಮಸಿ’ ಇತ್ಯಾದಿ ಕೆಲವು ಮಹಾವಾಕ್ಯಗಳು ಮಾತ್ರ ಪರಮ ಪ್ರಮಾಣವು. ಅವುಗಳಿಂದ ಸಿದ್ಧವಾದುದೇ ಪರಮಾರ್ಥ ತತ್ವವು. ಇತರ ವೇದ ಭಾಗ, ಪ್ರತ್ಯಕ್ಷಾದಿಗಳೂ ಸಹ ಅತತ್ವಾವೇದಕವು. ಬ್ರಹ್ಮವೊಂದೇ ಸತ್ಯ, ಪ್ರಪಂಚವೆಲ್ಲವೂ ಅಸತ್ಯ, ಜೀವೇಶ್ವರರಿಗೆ ಭೇದವಿಲ್ಲ. ಮಾಯಾ, ಅವಿದ್ಯಾ, ಅಜ್ಞಾನ ಮುಂತಾದ ಶಬ್ದಗಳಿಂದ ವ್ಯವಹರಿಸಲ್ಪಡುವ ವಿಚಿತ್ರ ಶಕ್ತಿಯೊಂದಿದೆ. ಅದೇ ಭೇದಭಾವವನ್ನು ತೋರ್ಪಡಿಸುತ್ತದೆ. ವಾಸ್ತವಿಕವಾಗಿ ಸತ್ಯವಲ್ಲದಿದ್ದರೂ ಮಾಯೆಯಿಂದಲೇ ಜಗತ್ತು ಸತ್ಯವಾಗಿಯೂ, ಬ್ರಹ್ಮಭಿನ್ನನಲ್ಲದ ಜೀವಾತ್ಮನು ಬ್ರಹ್ಮಭಿನ್ನನಂತೆಯೂ ತೋರುತ್ತದೆ. ಇದಕ್ಕೆ ವ್ಯಾವಹಾರಿಕ ಸತ್ಯವೆಂದು ಹೆಸರು. ಭ್ರಾಂತಿಯಲ್ಲಿ ತೋರುವುದೂ ಸಹ ಒಂದು ವಿಧ ಸತ್ಯವೇ. ಅದಕ್ಕೆ ಪ್ರಾತಿಭಾಸಿಕ ಸತ್ಯವೆಂದು ಸಂಕೇತ. ಹೀಗೆ ಸತ್ಯತ್ವವು ಮೂರು ವಿಧ ಇತ್ಯಾದಿ ಸಿದ್ಧಾಂತ ಮಾಡಿರುತ್ತಾರೆ.

ಈ ಸಿದ್ದಾಂತವೊಂದೇ ಅಭೇದ ದರ್ಶನವು, ಉಳಿದ ಐದು ದರ್ಶನಗಳೂ ಭೇದ ಸಿದ್ಧಾಂತವು. ಆದಕಾರಣ ಒಟ್ಟಿನಲ್ಲಿ ಆಸ್ತಿಕದರ್ಶನವನ್ನು ಭೇದವಾದ=ದೈತವಾದ ಮತ್ತು ಅಭೇದವಾದ= ಅದ್ವೈತವಾದ ಎಂದು ಎರಡು ಪಂಗಡವಾಗಿ ವಿಂಗಡಿಸಬಹುದು

ಗೀತೆಯ ಗುಟ್ಟು

ಭಿನ್ನ ಭಿನ್ನ ತತ್ವಶಾಸ್ತ್ರಗಳ ವಿಚಾರವಂತಿರಲಿ, ಪ್ರಕೃತ ಗೀತಾಶಾಸ್ತ್ರದ ರಹಸ್ಯವಾವುದೆಂಬುದನ್ನು ಪರಿಶೀಲಿಸೋಣ:- ಯಾವ ಪ್ರಾಣಿಯೂ – ಕ್ಷಣಮಾತ್ರವೂ ಕರ್ಮಮಾಡದೆ ಸುಮ್ಮನಿರಲಾರನು. ಕರ್ಮವೇ ಬಂಧಕವು, ಅದೇ ಜ್ಞಾನಸಾಧನವಾಗಿ ಮೋಕ್ಷದಾಯಕವೂ ಆಗುವುದು. ಹೇಗೆಂದರೆ:- ಎಲ್ಲವೂ ಸರ್ವೋತ್ತಮನಾದ ಭಗವಂತನ ಅಧೀನವು. ‘ಜೀವಾತ್ಮರು ಪರಸ್ಪರವಾಗಿಯೂ, ಈಶ್ವರನಿಂದಲೂ ಭಿನ್ನರು, ತಾರತಮ್ಯವುಳ್ಳವರೂ ಆಗಿ ಭಗವಂತನಿಂದ ನಿಯಮ್ಯರಾಗಿರುವರು. ಅವನ ಪ್ರೇರಣೆಯಿಲ್ಲದೇ ಯಾರೂ ಏನನ್ನೂ ಮಾಡಲಾರರು; ಬಿಡಲೂ-ಆರರು. ವರ್ಣಾಶ್ರಮಧರ್ಮವು ಭಗವಂತನಿಂದಲೇ ವಿಧಿಸಲ್ಪಟ್ಟಿದೆ. ಪ್ರತಿಯೊಬ್ಬನೂ ಅವನಲ್ಲಿ ಭಕ್ತಿಯಿಂದ ತನಗೆ ವಿಹಿತವಾದ ಧರ್ಮವನ್ನಾಚರಿಸಿ ಅದರಿಂದ ಭಗವಂತನು ಸಂತುಷ್ಟನಾಗಲೆಂದು ಭಾವಿಸಬೇಕು. ಯಾವ ಫಲವನೂ ಆಶಿಸಬಾರದು. ಎಂಬೀ ಅನುಸಂಧಾನದಿಂದ ಆಚರಿಸಲ್ಪಡುವ ಕರ್ಮವೇ ನಿವೃತ್ತ ಧರ್ಮವು. ಅದು ಜ್ಞಾನದ್ವಾರಾ ಮೋಕ್ಷಸಾಧನವು, ಅದೇ ಭಗವಂತನಿಗಭಿಮತವಾದ ಕರ್ಮಯೋಗವು. ಅದನ್ನು ಮೇಲ್ಕಂಡ ಅನುಸಂಧಾನಪೂರ್ವಕವಾಗಿ ಆಚರಿಸಿದವನಿಗೆ ಇಹದಲ್ಲಿ ಸಕಲ ಶ್ರೇಯಸ್ಸೂ ಲಭಿಸಿ ಕೊನೆಗೆ ಮುಕ್ತಿಯಾಗುವುದು. ಆದಕಾರಣ ಈ ರೀತಿಯಾಗಿ ಆಚರಿಸಿದ ಕರ್ಮವು ಮೋಚಕವಾಗುವುದು. ಆವುದಾದರೊಂದು ಫಲವನ್ನುದ್ದೇಶಿಸಿ ಅದನ್ನು ಪಡೆಯಬೇಕೆಂಬ ಆಸೆಯಿಂದ ನಾನೇ ಸ್ವತಂತ್ರವಾಗಿ ಕರ್ಮಮಾಡುತ್ತೇನೆಂಬ ಅಹಂಕಾರ ಪೂರ್ವಕವಾಗಿ ಮಾಡುವ ಕರ್ಮವು ಪ್ರವೃತ್ತಿಧರ್ಮವು. ಅದನ್ನಾಚರಿಸಿದವನಿಗೆ ಅವನು ಆಶಿಸಿದ ಫಲ ಮಾತ್ರವೇ ಲಭಿಸಿ, ಕೊನೆಗೆ ಬೇರೆ ಜನ್ಮವು ಬಂದು ಪುನಃ ಹೀಗೆಯೇ ಕರ್ಮಮಾಡುತ್ತಾ ಸಂಸಾರಬಂಧವು ಮುಂದುವರೆಯುವುದು. ಹೀಗೆ ಆಚರಿಸಿದ ಕರ್ಮವು ಬಂಧಕವಾಗುವುದು. ಇದು ತ್ಯಾಜ್ಯವು. ನಿವೃತ್ತಧರ್ಮವೇ ಗ್ರಾಹ್ಯ ಕರ್ಮಯೋಗವು. ಅದನ್ನು ಜ್ಞಾನಿಗಳೂ ಸಹ ಆಚರಿಸಲೇಬೇಕು. ಪ್ರಕೃತ ಯುದ್ಧವಾದರೋ ಪರಮಾತ್ಮದ್ವೇಷಿಗಳು ಮತ್ತು ಅವರ ಸಂಬಂಧಿಕರೂ ಆಗಿರುವ ದುಷ್ಟರನ್ನು ನಿಗ್ರಹಿಸುವ ಕಾರ್ಯವು. ಇದು ಕ್ಷತ್ರಿಯರಿಗೆ ವಿಹಿತಧರ್ಮವು, ಅರ್ಜುನ! ಅಧರ್ಮವೆಂಬ ಶಂಕೆಯನ್ನು ಬಿಡು. ಇದೇ ಭಗವಂತನ ಪೂಜೆಯೆಂದು ಭಾವಿಸಿ ಯಾವ ಫಲವನ್ನೂ ಆಶಿಸದೆ ಇದರಿಂದ ಭಗವಂತನು ಸಂತುಷ್ಟನಾಗಲೆಂಬ ಅನುಸಂಧಾನದಿಂದ ನಿನಗೆ ಒದಗಿರುವ ವಿಹಿತ ಯುದ್ಧವನ್ನು ಮಾಡಿ ಶ್ರೇಯೋಭಾಗಿಯಾಗು ಎಂಬುದೇ ಗೀತೆಯ ಗುಟ್ಟು.

ಇದರಲ್ಲಿ ಅಡಗಿರುವ :-

1.ಜೀವಸ್ವರೂಪವು ಅನಾದಿನಿತ್ಯ, ಜೀವರು ಭಿನ್ನರು, ತಾರತಮ್ಯವುಳ್ಳವರು, ಭಗವದಧೀನರು, ಕ್ಷಣಮಾತ್ರವೂ ಸುಮ್ಮನಿರದೆ ಸಹಜವಾಗಿ ಸತತ ಕರ್ಮಮಾಡುತ್ತಿರುವರು ಇತ್ಯಾದಿ ಜೀವತತ್ವ.

2.ಪ್ರವೃತ್ತಿ ಧರ್ಮವು ತ್ಯಾಜ್ಯವು, ನಿವೃತ್ತಧರ್ಮವೇ ಗ್ರಾಹ್ಯಕರ್ಮಯೋಗ, ಜ್ಞಾನಾನಂತರವೂ ಅದು ಆಚರಣೀಯ, ಅದರಲ್ಲಿಯೂ ಸ್ವಧರ್ಮಾಚರಣೆಯಿಂದಲೇ ಭಗವದಾರಾಧನೆಯ ಕರ್ತವ್ಯತೆ, ಅನ್ಯಧರ್ಮಾನುಪಾದೇಯತೆ.

3. ವರ್ಣಾಶ್ರಮಧರ್ಮ, ಯುದ್ಧವು ಕ್ಷತ್ರಿಯನಿಗೆ ವಿಹಿತ ಧರ್ಮ.

4. ಶ್ರೀಕೃಷ್ಣನೇ ಭಗವಂತನು, ಅವನು ಸಕಲ ಗುಣಪರಿಪೂರ್ಣನ್ನು, ಸತ್ಯ, ಸಕಲ ಪ್ರಪಂಚ ಸೃಷ್ಟ್ಯಾದಿಕರ್ತನು, ಜೀವಾದಿ ಪ್ರಪಂಚ ಭಿನ್ನನು, ಸ್ವತಂತ್ರನು, ಪುರುಷೋತ್ತಮನು, ಮೋಕ್ಷಾದಿ ಪುರುಷಾರ್ಥವೆಲ್ಲವೂ ಅವನ ಪ್ರಸಾದದಿಂದಲೇ ಪಡೆಯತಕ್ಕುದು, ಇತ್ಯಾದಿ ಭಗನ್ಮಹಿಮೆ.

5. ಭಗವದ್ಭಕ್ತಿಯೇ ಸರ್ವೋತ್ತಮ ಸಾಧನೆಯು.

ಎಂಬೀ ಮುಂತಾದ ವಿಷಯಗಳು ಗೀತೆಯಲ್ಲಿ ಸಪರಿಕರವಾಗಿ ನಿರೂಪಿಸಲ್ಪಟ್ಟಿವೆ. ಇವುಗಳಲ್ಲಿ ಯಾವ ವಿಷಯವು ಗೀತೆಯ ಯಾವ ಭಾಗದಿಂದ ನಿರೂಪಿತವಾಗಿದೆ? ಎನ್ನುವುದರ ಬಗ್ಗೆ ವಿವರಣೆಯನ್ನು ಶ್ರೀಮಧ್ವಾಚಾರ್ಯರಿಂದ ರಚಿತವಾಗಿರುವ ಗೀತಾತಾತ್ಪರ್ಯನಿರ್ಣಯದಲ್ಲಿ ಉಪೋದ್ಘಾತಭಾಗದಿಂದ ತಿಳಿಯಬಹುದು. ಇದೇ ಸಕಲ ತತ್ವಶಾಸ್ತ್ರಗಳ ಸಾರಾಂಶವೂ ಆಗಿದೆಯೆಂಬುದನ್ನೂ ಸಹ ಅಲ್ಲಿಯೇ ವಿಚಾರಪೂರ್ವಕವಾಗಿ ನಿರ್ಣಯಿಸಿದೆ. ಇದೇ ಗೀತೆಯ ನೈಜವಾದ ಅರ್ಥವು. ಇದಕ್ಕೆ ವಿಪರೀತವಾದ ಯಾವ ತತ್ವವೂ ಗೀತಾರ್ಥವಾಗಲಾರದು. ಹಿಂದೆ ಹೇಳಿರುವ ಉಪಕ್ರಮಾದಿ ತಾತ್ಪರ್ಯನಿರ್ಣಾಯಕ ಯುಕ್ತಿಗಳೆಲ್ಲವೂ ಇದೇ ಅರ್ಥವನ್ನೇ ಪುಷ್ಟೀಕರಿಸುತ್ತವೆ.

ವ್ಯಾಖ್ಯಾನಾಂತರ

ಪ್ರಾಚೀನಾಚಾರ್ಯರಲ್ಲಿಯೂ ಸಹ ಬಹು ಮಂದಿ ಪಕ್ಷಪಾತವಿಲ್ಲದೆ ತತ್ವದ ಕಡೆ ಗಮನ ಕೊಟ್ಟಂತೆ ಕಾಣಲಿಲ್ಲ. ಅವರೂ ಸಹ ತಮ್ಮದೇ ಆದ ಒಂದು ಸಿದ್ದಾಂತವನ್ನು ನಿರ್ಧರಿಸಿ ಅದೇ ಗೀತೋಕ್ತವೆಂದು ತಮ್ಮ ಬುದ್ಧಿ ಕೌಶಲ್ಯದಿಂದ ನಿರೂಪಿಸಿರುವರು. ಈ ಅಭಿಪ್ರಾಯವು :-

ಯಥಾ ಚಾಯಮರ್ಥಃ ತಥಾ ಪ್ರಕರಣಶೋ ವಿಭಜ್ಯ ತತ್ರ ತತ್ರ ದರ್ಶಯಿಷ್ಯಾಮಃ – ಶಾಂಕರ ಗೀತಾಭಾಷ್ಯ

ಇತ್ಯಾದಿ ವಚನಗಳಿಂದಲೇ ಸ್ಪಷ್ಟ ಪಡುತ್ತದೆ,

ಗೀತೆಯಲ್ಲಿ:-

‘ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ
ಶಕ್ಯ ಏವಂ ವಿಧೋ ದ್ರಷ್ಟು೦ ದೃಷ್ಟವಾನಸಿ ಮಾಂ ಯಥಾ

ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂ ವಿಧೋಽರ್ಜುನ
 ಜ್ಞಾತುಂ ದ್ರಷ್ಟುಂ ಚ ತತ್ವೇನ ಪ್ರವೇಷ್ಟುಂ ಚ ಪರಂತಪ

ಇತ್ಯಾದಿ ಶ್ಲೋಕಗಳಿಂದ ವಿಷ್ಣುಭಕ್ತಿಯೇ ಸರ್ವೋತ್ತಮ ಸಾಧನವೆಂದು ಇತರ ನಿಷೇಧಪೂರ್ವಕವಾಗಿ ಉಕ್ತವಾಗಿದೆ. ಮಾಹಾತ್ಮ್ಯಜ್ಞಾನಪೂರ್ವಕ ಸುದೃಢಸ್ನೇಹವೇ ಭಕ್ತಿಯು. ಇಂತಹ ಭಕ್ತಿಗೆ ಜೀವೇಶ್ವರೈಕ್ಯವಾದದಲ್ಲಿ ಎಡೆಯೇ ಇಲ್ಲ. ಹೇಗೆಂದರೆ :– ಜೀವನೇ ಪರಮಾತ್ಮನು, ಬೇರೆ ಸತ್ಯವಸ್ತುವಿಲ್ಲ; ಬ್ರಹ್ಮವೊಂದೇ ಸತ್ತು ಎಂಬ ಸಿದ್ಧಾಂತದಲ್ಲಿ ಎರಡು ಸತ್ಯವಸ್ತುಗಳೇ ಇಲ್ಲದಿರುವಾಗ ಭಕ್ತಿ ಮಾಡುವವನಾರು? ಯಾರಲ್ಲಿ ಭಕ್ತಿ ಮಾಡಬೇಕು? ಪರಮಾತ್ಮನು ನಿರ್ಗುಣ, ನಿರಾಕಾರ, ಸನ್ಮಾತ್ರ ಎಂಬ ವಾದದಲ್ಲಿ ಶೂನ್ಯಸದೃಶನಾದ ಪರಮಾತ್ಮನಲ್ಲಿ ಮಾಹಾತ್ಮ್ಯೆಯನ್ನು ಬಗೆಯುವುದೆಂತು? ಮಾಹಾತ್ಮ್ಯೆ ಸಂಪಾದಕವಾದ ಸೃಷ್ಟಿ ಕರ್ತೃತ್ವಾದಿಗಳೆಲ್ಲವೂ ಮಿಥ್ಯೆ=ಸುಳ್ಳು ಎಂಬುದೇ ಅದ್ವೈತವಾದವು. ಅಂತಹ ಮಾಯಿಕ ಸೃಷ್ಟಿಕರ್ತೃತ್ವಾದಿಗಳು ಮಾಹಾತ್ಮ್ಯೆಯನ್ನು ಬಣ್ಣಿಸಲಾರವು. ಮಂತ್ರೌಷಧಾದಿಗಳ ಸಹಾಯದಿಂದ ಮಾಯಿಕ ಸೃಷ್ಟಿಯನ್ನು ಸಾಧಾರಣ ಜನರೂ ಸಹ ಮಾಡುತ್ತಿರುವುದು ಲೋಕವಿದಿತವಾಗಿದೆ. ಹೀಗೆ ನಿರ್ಗುಣವಾದದಲ್ಲಿ ಪರಮಾತ್ಮನಿಗೆ ಮಾಹಾತ್ಮ್ಯೆಯೇ ಸಲ್ಲದು. ಅಂದ ಬಳಿಕ ಮಾಹಾತ್ಮ್ಯಜ್ಞಾನಪೂರ್ವಕ ಸ್ನೇಹವೆಂಬ ಭಕ್ತಿಗೆ ಸ್ಥಾನವೆಲ್ಲಿದೆ? ಹೀಗೆಯೇ ಗೀತೋಕ್ತವಾದ ಸಕಲ ಮೇಲ್ಕಂಡ ತತ್ವಗಳೂ ಐಕ್ಯವಾದಕ್ಕೆ ವಿರುದ್ಧವಾಗಿಯೇ ಇವೆ. ಆದರೆ ಕೆಲ ಶ್ಲೋಕಗಳು ಆಪಾತತಃ (ಮೇಲೆ) ಐಕ್ಯವನ್ನು ಬೋಧಿಸುವಂತೆ ತೋರುತ್ತವೆ. ಒಳಹೊಕ್ಕು ಉಕ್ತರೀತಿಯಿಂದ ವಿಮರ್ಶಿಸಿದರೆ ಅದರ ನೈಜವಾದ ಅರ್ಥವು ವಿಮರ್ಶಕರಿಗೆ ತೋರದಿರದು. ನಮ್ಮ ಈ ಭಾಷಾಂತರದಲ್ಲಿ ಅಂತಹ ಶ್ಲೋಕಗಳ ಕೆಳಗೆ ಶ್ಲೋಕಾರ್ಥದ ಯುಕ್ತಾಯುಕ್ತತೆಯನ್ನು ವಿಮರ್ಶೆ ಮಾಡಿ ಸಿದ್ದಾಂತವನ್ನು ಟಿಪ್ಪಣಿಯಲ್ಲಿ ತೋರಿಸಿರುತ್ತೇವೆ. ಆದಕಾರಣ ಅದೇ ವಿಷಯವನ್ನು ಪುನಃ ಇಲ್ಲಿ ಪ್ರಸ್ತಾಪಿಸುವುದಿಲ್ಲ. ಜಿಜ್ಞಾಸುಗಳು ಈ ಗ್ರಂಥವನ್ನೋದಿ ತಿಳಿಯಬಹುದು.

ಗೀತಾರ್ಥವಾದ ಉಕ್ತ ಸಿದ್ದಾಂತವನ್ನು ಎತ್ತಿಹಿಡಿದಿರುವವರು ಶ್ರೀಮಧ್ವಾಚಾರ್ಯರೂಬ್ಬರೇ ಸರಿ. ಅವರು ಗೀತೆಗೆ ಭಾಷ್ಯ ಮತ್ತು ತಾತ್ಪರ್ಯನಿರ್ಣಯ ಎಂಬುದಾಗಿ ಎರಡು ವ್ಯಾಖ್ಯಾನಗಳನ್ನು ಬರೆದಿರುವರು. ಅವೆರಡಕ್ಕೂ ಟೀಕಾಟಿಪ್ಪಣಿಗಳನ್ನು, ಪೂರ್ವಾಚಾರ್ಯರು ರಚಿಸಿರುತ್ತಾರೆ. ಗಹನವಾದ ಈ ಗ್ರಂಥಗಳ ಸಾರವನ್ನು ಸಂಗ್ರಹಿಸಿ, ಅದರಿಂದ ನಿಷ್ಪನ್ನವಾಗುವ ಗೀತಾರ್ಥವನ್ನು ಸುಬೋಧವಾದ ಗಂಭೀರ ಶೈಲಿಯಿಂದ ನಿರ್ಣಯಾತ್ಮಕವಾಗಿ ತಿಳಿಸುವಂತಹ ‘ವಿವೃತಿ’ ಎಂಬ ವ್ಯಾಖ್ಯಾನವನ್ನು ಶ್ರೀಮದ್ರಾಘವೇಂದ್ರತೀರ್ಥಗುರುಸಾರ್ವಭೌಮರು ರಚಿಸಿರುತ್ತಾರೆ. ಈ ಗ್ರಂಥಗಳನ್ನನುಸರಿಸಿ ನಮ್ಮ ಭಾಷಾಂತರವು ಸಾಗಿದೆ.

ಅನೇಕಾರ್ಥ

ಮಹಾಭಾರತಾಂತರ್ಗತವಾದ ಗೀತೆಗೆ ಇದೊ೦ದೇ ಆರ್ಥವು ಬೇರಾವುದೂ ನಿಜಾರ್ಥವಲ್ಲವೆನ್ನುವುದು ಹೇಗೆ? ಇಡೀ ಮಹಾಭಾರತಕ್ಕೆ ಅನೇಕ ಅರ್ಥಗಳಿವೆಯೆಂದು ಅನೇಕ  ಪ್ರಮಾಣಗಳು ಸಾರುತ್ತಿರುವಾಗ, ಅದರಲ್ಲಿಯೂ ಸಾರತಮಭಾಗವಾದ ಗೀತೆಗೂ ಅನೇಕ ತತ್ವಾರ್ಥಗಳಿರಬೇಕಾದುದುಚಿತವಲ್ಲವೇ ಎಂದರೆ, ನಿಜ; ಅನೇಕಾರ್ಥಗಳನ್ನು ಪ್ರಾಚೀನರೂ ಒಪ್ಪಿರುವರು, ಅವೆಲ್ಲವೂ ಭಿನ್ನ ಭಿನ್ನ ಅಧಿಕಾರಿಗಳು ತಿಳಿಯಲರ್ಹವು ಮತ್ತು ಮೇಲ್ಕಂಡ ಅರ್ಥಕ್ಕೆ ಅವಿರುದ್ಧವೂ ಆಗಿವೆ. ಅಂತಹುದು ಪ್ರಾಮಾಣಿಕವೇ ಅಹುದು. ಮೇಲೆ ಹೇಳಿರುವ ಅರ್ಥಕ್ಕೆ ವಿರುದ್ಧ ವಾದ ಯಾವ ಅರ್ಥವೂ ಗೀತೆಗೆ ಹೊಂದುವುದಿಲ್ಲವೆಂದೇ ನಾವು ಇಲ್ಲಿ ಪ್ರತಿಪಾದಿಸಿರುವೆವು.

ಭಾರತಕ್ಕೆ ಅವಿರುದ್ಧವಾದ ಅನೇಕಾರ್ಥಗಳಿವೆಯೆಂಬುದು ಹೀಗೆ ನಿರೂಪಿತವಾಗಿದೆ :-

ಬ್ರಹ್ಮಾದ್ಯೈಃ ಪ್ರಾರ್ಥಿತೋ ವಿಷ್ಣುಃ ಭಾರತಂ ಸ ಚಕಾರ ಹ
ಯಸ್ಮಿನ್ ದಶಾರ್ಥಾಃ ಸರ್ವತ್ರ ನ ಜ್ಞೇಯಾಃ ಸರ್ವಜಂತುಭಿಃ – ನಾರದೀಯ ಪುರಾಣ. ದಶಾವರಾರ್ಥಂ ಸರ್ವತ್ರ ಕೇವಲಂ ವಿಷ್ಣು ಬೋಧಕಂ
ಪರೋಕ್ಷಾರ್ಥಂ ತು ಸರ್ವತ್ರ ವೇದಾದಪ್ಯುತ್ತಮಂ ತು ಯತ್ – ಸ್ಕಾಂದಪುರಾಣ,

ಮನ್ವಾದಿ ಕೇಚಿದ್ಭೃವತೇ ಹ್ಯಾಸ್ತಿಕಾದಿ ತಥಾಪರೇ
ತಥೋಪರಿಚರಾದ್ಯನೈ ಭಾರತಂ ಪರಿಚಕ್ಷತೇ – ಮಹಾಭಾರತ

ಭಾರತಕ್ಕೆ ಬಹು ಅರ್ಥಗಳಿವೆ. ಅವೆಲ್ಲವೂ ಎಲ್ಲರಿಗೂ ವೇದ್ಯವಲ್ಲ. ಭಾರತವು ಮನು, ಆಸ್ತಿಕ, ಉಪರಿಚರ ಎಂಬ ಮೂರು ಅರ್ಥಗಳನ್ನೊಳಗೊಂಡಿದೆ. ಮನು ಎಂದರೆ: – ಧರ್ಮ, ಭಕ್ತಿ-ಜ್ಞಾನ-ವೈರಾಗ್ಯ- ಪ್ರಜ್ಞಾ-ಮೇಧಾ-ಧೃತಿ-ಸ್ಥಿತಿ-ಯೋಗ-ಪ್ರಾಣ-ಬಲ ಎಂಬ ಹತ್ತು ಗುಣಗಳು, ಶ್ರವಣ, ಮನನ, ಶೀಲ, ವಿನಯ, ವೇದ ಎಂಬ ಆರು ಅರ್ಥಗಳು. ಇವುಗಳಲ್ಲಿ ಧರ್ಮಕ್ಕೆ ಧರ್ಮರಾಜ, ಭಕ್ತ್ಯಾದಿ ಹತ್ತು ಗುಣಗಳಿಗೆ ಭೀಮಸೇನ, ಶ್ರವಣ-ಮನನಗಳಿಗೆ ಅರ್ಜುನ, ಶೀಲಕ್ಕೆ ನಕುಲ, ವಿನಯಕ್ಕೆ ಸಹದೇವ, ವೇದಕ್ಕೆ ದೌಪದೀದೇವಿಯೂ ಅಭಿಮಾನಿಗಳು. ಅಭಿಮಾನಿ ಬೋಧಕ ಶಬ್ದದಿಂದ ಅವನ ಅಭಿಮಾನ ಪಾತ್ರವಸ್ತುವನ್ನೂ, ಅಭಿಮನ್ಯಮಾನ ವಾಚಕ ಪದದಿಂದ ಅಭಿಮಾನಿಯನ್ನೂ ವ್ಯವಹರಿಸುವ ವಾಡಿಕೆಯಿದೆ. ಪ್ರಕೃತ ಭಾರತದಲ್ಲಿನ ಧರ್ಮ-ಭೀಮಾದಿ ಪದಗಳಿಗೆ ಅವರವರ ಅಭಿಮಾನ ವಿಷಯವಾದ ಉಕ್ತಧರ್ಮ- ಭಕ್ತ್ಯಾದಿಗಳೇ ಅರ್ಥವೆಂದು ಭಾವಿಸಿ, ಅವುಗಳ ಪ್ರಶಂಸೆಯ ಮೂಲಕವಾಗಿ ಪಂಚ-ಪಾಂಡವರು ಮತ್ತು ದೌಪದೀದೇವಿಯವರ ಮಾಹಾತ್ಮ್ಯೆಯು ಪ್ರತಿಪಾದಿತವಾಗಿದೆಯೆಂಬುದೇ ಮನ್ವರ್ಥಕವೆಂಬುದರ ಭಾವ.

ಆಸ್ತಿಕ ಎಂದರೆ : – ಧರ್ಮಾದಿ-ಪಂಚಪಾಂಡವರು ಮತ್ತು ದೌಪದೀದೇವಿಯು. ಅವರನ್ನೇ ವಾಚಕ ಶಬ್ದದಿಂದ ಬಹಿರಂಗವಾಗಿ ನಿರ್ದೇಶಿಸಿ, ಅವರ ಉತ್ಪತ್ತಿ, ಜೀವನವೃತ್ತಾಂತ, ಯುದ್ಧ ಮುಂತಾದುವನ್ನು ಪ್ರತಿಪಾದಿಸುವುದಕ್ಕೆ ಆಸ್ತಿಕಾರ್ಥವೆಂದು ಹೆಸರು.

ಉಪರಿಚರ ಎಂದರೆ ಸರ್ವೋತ್ತಮನಾದ ವಿಷ್ಣುವು. ಸ್ವರ-ವರ್ಣ-ಪದಾತ್ಮಕವಾದ ಸಕಲ ಭಾಗಗಳಿಂದಲೂ ಪರಮಮುಖ್ಯವೃತ್ತಿಯಿಂದ ಸರ್ವೋತ್ತಮ ವಿಷ್ಣುಮಹಿಮಾವರ್ಣನೆಯೇ ಭಾರತದ ಆಶಯ ಎಂಬುದು ಉಪರಿಚರಾರ್ಥವು. ಈ ಅರ್ಥವು ಸರ್ವರಿಗೂ ವೇದ್ಯವಾಗಲಾರದು; ಉತ್ತಮಜ್ಞಾನಿಗಳಿಗೆ ಮಾತ್ರ ಗಮ್ಯವು. ಹೀಗೆ ಭಾರತಕ್ಕೆ ಅವಿರುದ್ಧ್ಯಾನೇಕಾರ್ಥಗಳಿವೆಯೆಂದು ಶಾಸೋಕರೀತಿಯಿಂದ ತಿಳಿಯಬೇಕು.

ಪ್ರಯೋಜನ

ಪೂರ್ವದಲ್ಲಿ ಒಂದೊಂದು ಕೆಲಸವನ್ನು ಒಂದೊಂದು ಗುಂಪಿನವರೇ ಮಾಡುತಿದ್ಧರು. ವ್ಯವಸಾಯ, ಬಟ್ಟೆನೇಯುವುದು-ಪಾತ್ರೆ ಮಾಡುವುದು ಶಿಲ್ಪ-ಯಂತ್ರ ನಿರ್ಮಾಣ ಇತ್ಯಾದಿ, ಕೈಗಾರಿಕೆ, ವ್ಯಾಪಾರ, ರಾಜ್ಯಶಾಸನ, ಶ್ರೌತ ಸ್ಮಾರ್ತ ಕರ್ಮ, ಲೌಕಿಕವೈದಿಕವಿದ್ಯೆ ಮುಂತಾದ ಜೀವನೋಪಯುಕ್ತ ಕಾರ್ಯಗಳಲ್ಲಿ ಅನಾದಿಕಾಲದಿಂದಲೂ ಆಯಾಯ ಗುಂಪಿನವರೇ ದುಡಿಯುತ್ತಿದ್ಧರು. ಅದರ ಅನುಭವ ವಾಸನೆಯು ಅವರವರ ರಕ್ತಗತವಾಗಿ ವಂಶ ಪರಂಪರೆಯಲ್ಲಿ ಪ್ರವಹಿಸುತ್ತಿದ್ಧಿತು. ಅದರ ಫಲವಾಗಿ ಆಯಾಯ ಕಾರ್ಯಗಳು ಹುರುಪಿನಿಂದ ಸಾಗಿ ಸಂಪೂರ್ಣ ಫಲಕಾರಿಯಾಗುತ್ತಿದ್ದುವು. ಒಬ್ಬರ ಕೆಲಸದಲ್ಲಿ ಇನ್ನೊಬ್ಬರು ಕೈ ಹಾಕುತ್ತಿರಲಿಲ್ಲ. ಪ್ರತಿಯೊಬ್ಬನಿಗೂ ಎಲ್ಲವೂ ಬೇಕಾದುದೇ ಆದರೂ ಎಲ್ಲರೂ ಪರಸ್ಪರ ಸಹಕಾರದಿಂದಲೇ ತಮಗೆ ಬೇಕಾದುದೆಲ್ಲವನ್ನೂ ಪಡೆಯುತ್ತಿದ್ಧರು. ತಮ್ಮ ತಮ್ಮ ಶಕ್ತಿಯ ಪರಿಮಿತಿಯನ್ನು ಎಲ್ಲರೂ ಅರಿತು, ತಮ್ಮ ಎಲ್ಲೆಯಲ್ಲಿ ತಾವಿರುವುದೇ ಧರ್ಮ, ಎಲ್ಲೆಯನ್ನತಿಕ್ರಮಿಸಿ ಪರಧರ್ಮದಲ್ಲಿ ಕೈ ಹಾಕುವುದು ಅಧರ್ಮ ಎಂಬ ನಂಬಿಕೆಯಿಂದ ವರ್ತಿಸುತ್ತಿದ್ಧರು. ಆಸ್ತಿಕಮನೋಭಾವವು ಚೆನ್ನಾಗಿದ್ಧಿತು. ಸಾಮಾನ್ಯವಾಗಿ ಇತರರಿಗೆ ಹಿಂಸೆಯಾಗುವ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ಸತ್ಯವನ್ನೇ ನುಡಿಯುತ್ತಿದ್ಧರು. ಸುಳ್ಳಾಡಿದವರಿಗೆ ತಕ್ಷಣದಲ್ಲಿಯೇ ರಾಜದಂಡವು ವಿಧಿಸಲ್ಪಡುತ್ತಿದ್ಧಿತು. ಅನ್ಯಾಯವರ್ತನೆ, ಅತ್ಯಾಶೆ, ಸ್ವಾರ್ಥ, ಪರಹಿಂಸೆ ಇವುಗಳ ಕಡೆ ಜನರು ಹೆಚ್ಚಾಗಿ ಗಮನಿಸುತ್ತಿರಲಿಲ್ಲ. ಅಂತಹ ಉಚ್ಚ ಸಂಸ್ಕೃತಿಯಿಂದ ಜನಾಂಗದಲ್ಲಿ ಶಾಂತಿಯು ನೆಲೆಸಿ ಸುಖಮಯ ಜೀವನವು ಸಾಗುತ್ತಿದ್ಧಿತು.

ಇಂದೂ ಜನತೆಯು ಆಶಿಸುವುದು ಶಾಂತಿಸುಖಗಳೇ ಆಹುದು. ಆದರೆ ಇದು ವಿಜ್ಞಾನಯುಗ ಕೈಗಾರಿಕೆಯ ಪ್ರಪಂಚ, ಹೊಸಹೊಸ ತಯಾರಿಕೆಗಳು, ಸ್ವಾತಂತ್ರದ ಆಶೆ, ಒಬ್ಬರನ್ನೊಬ್ಬರು ಮೀರಿಸಬೇಕೆಂಬ ಸ್ಪರ್ಧೆ, ಒಬ್ಬರು ಆಟಂ ಬಾಂಬನ್ನು ತಯಾರಿಸಿದರೆಂದರೆ ಇನ್ನೊಬ್ಬರಿಗೆ ಅದಕ್ಕೂ ಮೀರಿದ ಹೈಡ್ರೋಜನ್ ಬಾಂಬ್ ತಯಾರಿಕೆಯ ಗಮನ, ಇತರರಿಗೆ ಇವೆರಡನ್ನೂ ಮುಳುಗಿಸುವ ಯೋಚನೆ. ಹೀಗೆ ಮೇಲಿಂದ ಮೇಲೆ ಹಾರಾಡಿ ನೆಲೆಗಾಣದೆ ಬಿದ್ದು, ಬೆಂದು ಬಳಲುತ್ತಿರುವುದೇ ದಿನಚರಿಯಾಗಿದೆ. ವಿಜ್ಞಾನಕ್ಕೆ ಕೊನೆಯಿಲ್ಲ. ಇಂದು ಸಾಧುವಾಗಿ ಕಂಡುದು ನಾಳೆ ಪುನಃ ಪರಿಶೋಧನೆಯಿಂದ ಅಸಾಧುವೆಂದು ಸಾರುತ್ತಿರುವುದು ಕಂಡಿದೆ. ಯಾವ ಮನುಷ್ಯನೂ ಸರ್ವಜ್ಞನಲ್ಲ; ಆದರೂ ಸರ್ವಜ್ಞರಂತೆ ನಟಿಸುವರು. ಅದರಿಂದ ಜನತೆಗೆ ಹಿಂಸೆಯಾದರೂ ಲೆಕ್ಕಿಸುವುದಿಲ್ಲ. ಸ್ವಾರ್ಥ ಸಾಧನೆಯಾದರೆ ಸರಿ. ವೇದಿಕೆಯ ಮೇಲೆ ನಿಂತಾಗ ಲೋಕಕಲ್ಯಾಣದ ಮಾತುಗಳು, ನಿಸ್ವಾರ್ಥತೆಯ ಪ್ರಚಾರ, ಸೇವಾಮನೋಭಾವಾವಿಷ್ಕರಣ, ಕೆಲಸ ಮಾಡುವಾಗ ಅವುಗಳ ಸುಳಿವೇ ಇರುವುದಿಲ್ಲ; ವಿಪರೀತವಾಗಿಯೇ ನಡೆಯುತ್ತಿರುವುದು. ಹೀಗಾಗಿ ದೇಶದಲ್ಲೆಲ್ಲಾ ಅಶಾಂತಿಯು ತಾಂಡವವಾಡುತ್ತಿದೆ. ಧರ್ಮಕ್ಕೆ ತೌರೂರಾಗಿದ್ದ ನಾಡು ಇಂದು ಧರ್ಮಬಾಹಿರವಾಗಿ ಕ್ಲೇಶಮಯ ಜೀವನದಲ್ಲಿ ಸಿಲುಕಿ ನರಳುತ್ತಿದೆ. ಇಂತಹ ದುರವಸ್ಥೆಗೆ ಸರ್ವಜ್ಞರಾದ ಪೂರ್ವಾಚಾರ್ಯರ ಉಪದೇಶವನ್ನು ಮೂಲೆಗೊತ್ತಿ, ಉನ್ನತಮಟ್ಟದ ಪೂರ್ವಸಂಸ್ಕೃತಿಯನ್ನು ದೂರಮಾಡಿ, ನವನಾಗರಿಕತೆಯ ಹೆಸರಿನಲ್ಲಿ ಅಧರ್ಮಮಾರ್ಗದಲ್ಲಿಯೇ ಸಾಗುತ್ತಾ, ನಾವು ಎಲ್ಲಿಂದ ಹೊರಟೆವು? ಈಗ ಎಲ್ಲಿದ್ದೇವೆ? ಎಲ್ಲಿ ನಿಲ್ಲುವೆವು? ಶಾಶ್ವತನೆಲೆ ಯಾವುದು? ಈಗ ಮಾಡಬೇಕಾದುದೇನು? ಇತ್ಯಾದಿ ಪೂರ್ವೋತ್ತರ-ಕರ್ತವ್ಯಗಳನ್ನರಿಯದೆ ಮನಬಂದಂತೆ ಸ್ವತಂತ್ರವಾಗಿ ಸಾಗುತ್ತಿರುವುದೇ ಮೂಲವು. ಈ ಮೂಲವನ್ನು ಬೇರುಸಹಿತ ಕಿತ್ತೊಗೆಯಲು ಶಾಸ್ತ್ರವು ಏಕಮಾತ್ರ ಸಾಧನೆಯು. ಅದೇ ಉಚ್ಚ ಸಂಸ್ಕೃತಿಗೆ ಮೂಲಾಧಾರವು. ಅದರಲ್ಲಿಯೂ ಸಾರತಮವಾದುದು ಗೀತಾಶಾಸ್ತ್ರವು. ‘ಸಕಲವೂ ಭಗವದಧೀನವಾಗಿರುವುದರಿಂದ ಸರ್ವಸ್ವಾಮಿಯಾದ ಭಗವಂತನಲ್ಲಿ ಭಕ್ತಿಪೂರ್ವಕವಾಗಿ ಫಲಾಸಕ್ತಿಯಿಲ್ಲದೆ ವಿಹಿತ ಧರ್ಮವನ್ನಾಚರಿಸುವುದೇ ಭಗವದಾರಾಧನೆಯು, ಅದೇ ಪರಮ ಧರ್ಮವು, ಶ್ರೇಯಸ್ಕರವು ಅದಕ್ಕೆ ವಿರುದ್ಧವಾದುದಲ್ಲವೂ ಅಧರ್ಮವು’ ಎಂಬುದೇ ಗೀತೆಯ ಸಾರಾಂಶ. ಇದರ ವಿವರಣೆಯನ್ನು ಹಿಂದೆ ಕೊಟ್ಟಿದೆ. ಇದೇ ಆದಿಯಲ್ಲಿ ಹೇಳಿದ, ಮನುಷ್ಯನ ಬೆನ್ನುಹತ್ತಿರುವ ಸಮಸ್ಯೆಗಳ ಪರಿಹಾರಮಾರ್ಗವು. ಅದನ್ನರಿತು ಆಚರಿಸುವುದರಿಂದ ಈಗ ತಲೆದೋರಿರುವ ಕಷಾಯ ಭಾವಗಳೆಲ್ಲವೂ ತೊಲಗುವುದು, ಶಾಂತಿಯು ನೆಲೆಸುವುದು. ಉಚ್ಚ ಸಂಸ್ಕೃತಿಯಿಂದ ಪರಿಶುದ್ಧರಾಗಿ ಸುಖಮಯ ಜೀವನವನ್ನು ಕಾಣುವೆವು. ಎಂದೂ ಅಚ್ಚಳಿಯದ ನಿಜಸುಖವನ್ನೂ ಭಗವಂತನು ಅನುಗ್ರಹಿಸುವನು.

ಇಂದು ನಾಡಿನಲ್ಲಿ ಹಬ್ಬಿರುವ ಅಶಾಂತಿ ವಾತಾವರಣಕ್ಕೆ ಗೀತೋಪದೇಶವೇ ಪರಮಮೌಷಧವು. ಅದರಿಂದಲೇ ಜನತೆಯ ಉದ್ಧ್ಯಾರವಾಗಬೇಕು; ನಾಡು ಶಾಂತಿಯ ಬೀಡಾಗಿ ಬೆಳಗಬೇಕು; ಉಚ್ಚ ಸಂಸ್ಕೃತಿಯಿಂದ ಮೆರೆಯಬೇಕು. – ಪ್ರಾಯಿಕವಾಗಿ ಲೌಕಿಕವಿದ್ಯಾಭ್ಯಾಸಂಗಿಗಳಾಗಿ, ಸ್ವಲ್ಪ ಮಟ್ಟಿಗೆ ಸಂಸ್ಕೃತ ಭಾಷೆಯನ್ನರಿತು ಭಾಷಾಂತರ ಸಹಾಯದಿಂದ ಗೀತೆಯನ್ನೋದಿದ ಜನರು ಮತ್ತು ಸಾಮಾನ್ಯ ಪಂಡಿತರೂ ಸಹ ಹೇರಳವಾಗಿ ಗೀತೆಯನ್ನು ಕನ್ನಡಿಸಿರುವುದು ಕಂಡಿದೆ.

ಈ ಪರಿಸ್ಥಿತಿಯನ್ನರಿತು ನಮ್ಮ ಮಿತ್ರರನೇಕರು ಗೀತೆಯ ತತ್ವಾರ್ಥವನ್ನು ಯಥಾವತ್ತಾಗಿ ತಿಳಿಸುವಂತಹ ತಿಳಿಗನ್ನಡ ಗ್ರಂಥವೊಂದನ್ನು ರಚಿಸಬೇಕೆಂದು ಒತ್ತಾಯಮಾಡಿದ ಕಾರಣ ಈ ಗ್ರಂಥವನ್ನು ರಚಿಸಿ ಪ್ರಚುರಪಡಿಸಿರುವೆವು.

ಈ ಪುಸ್ತಕದಲ್ಲಿ ಮೇಲ್ಭಾಗದಲ್ಲಿ ಗೀತೆಯ ಶ್ಲೋಕಗಳನ್ನೂ, ಅದರ ಕೆಳಗೆ ಕನ್ನಡಭಾಷೆಯಲ್ಲಿ ಆಯಾಯಾ ಶ್ಲೋಕಗಳ ತಾತ್ಪರ್ಯವನ್ನೂ, ಅದರ ಕೆಳಗಣ ಟಿಪ್ಪಣಿಯಲ್ಲಿ ಉಕ್ತಶ್ಲೋಕಾರ್ಥಗಳ ಔಚಿತ್ಯವನ್ನು ಪ್ರಮಾಣೋದಾಹರಣ ಪೂರ್ವಕವಾಗಿ ವಿವರಿಸಿ, ತುಲನಾತ್ಮಕ ದೃಷ್ಟಿಯಿಂದ ವಿಷಯ ವಿಮರ್ಶೆಯನ್ನೂ ಯೋಜಿಸಲಾಗಿದೆ. ಪಂಡಿತರು ಮೂಲಶ್ಲೋಕಗಳಿಗಾಗಿಯೂ, ಸಂಸ್ಕೃತವನ್ನರಿಯದ ಗೀತಾರ್ಥ ಜಿಜ್ಞಾಸುಜನರು ಮಧ್ಯಭಾಗದಲ್ಲಿರುವ ಕನ್ನಡಾನುವಾದಕ್ಕಾಗಿಯೂ, ವಿಮರ್ಶಕರು ಕೆಳಗಣ ಟಿಪ್ಪಣಿ ಭಾಗವನ್ನು ಗ್ರಹಿಸಿ ತಮ್ಮ ವಿಮರ್ಶೆಯನ್ನು ಮುಂದುವರೆಸುವುದಕ್ಕೂ ಸಹ ಅನುಕೂಲವಾಗಿರುವುದರಿಂದ ಈ ಗ್ರಂಥವು ಸಕಲ ಸಜ್ಜನರಿಗೂ ಉಪಾದೇಯವಾಗುವುದೆಂದು ಭಾವಿಸಿದೆ.

ಇದರಲ್ಲಿ ಶ್ಲೋಕ ಸಂಖ್ಯೆಯನ್ನು ಗುರ್ತಿಸಿ ಸಂದರ್ಭಾದಿಗಳನ್ನು ತಿಳಿಸುವ ಅವತಾರಿಕೆಯನ್ನು, ಬರೆದು ಅದರ ಮುಂದೆ:– ಈ ಗುರ್ತುಮಾಡಿ ಆಯಾಯಾ ಶ್ಲೋಕಗಳ ಅರ್ಥಾನುವಾದವು ಪ್ರಾರಂಭವಾಗಿದೆ. ಮತಾಂತರಗಳಲ್ಲಿ ಭಿನ್ನಾರ್ಥವಿರುವ ಹಲವು ಶ್ಲೋಕಗಳಿಗೆ ಆಯಾಯಾ ಭಾಷ್ಯಕಾರರು ಹೇಳಿರುವ ಭಿನ್ನಾರ್ಥಗಳನ್ನೂ ಸಂಗ್ರಹಿಸಿ ಅಲ್ಲಲ್ಲಿ ಉಲ್ಲೇಖಿಸಿದೆ. ಅದರ ಸಾಮರಸ್ಯವು ಕೆಳಗಣ ಟಿಪ್ಪಣಿಯಲ್ಲಿ ಲಿಖಿತವಾಗಿದೆ.

ಇಂತು ಇಹಪರ ಶ್ರೇಯಸ್ಸಾಧನವಾದ ಗೀತೆಯ ನಿಜಾರ್ಥವು ಎಲ್ಲರಿಗೂ ಸುಲಭವಾಗಿ ತಿಳಿಯುವಂತೆ ತಿಳಿಗನ್ನಡದಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಕನ್ನಡ ಜನತೆಯು ಈ ಪುಸ್ತಕವನ್ನೋದಿ ತತ್ವಾರ್ಥವನ್ನರಿತು ವಿಹಿತಮಾರ್ಗಾವಲಂಬನೆಯಿಂದ ಶಾಂತಿ ಪಥದಲ್ಲಿ ಸಾಗಿ ಶ್ರೇಯೋಭಾಗಿಗಳಾಗುವುದರ ಮೂಲಕ ಈ ಉದ್ಯಮವನ್ನು ಸಾರ್ಥಕಗೊಳಿಸಿ ಶ್ರೀಕೃಷ್ಣ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಬೇಕೆಂಬುದೇ ನಮ್ಮ ಹೆಬ್ಬಯಕೆ.

ಅಕ್ಷಯಂ ಕರ್ಮ  ಯಸ್ಮಿನ್ಪರೇ ಸ್ವರ್ಪಿತಂ
ಪ್ರಕ್ಷಯಂ ಯಾಂತಿ ದುಃಖಾನಿ ಯನ್ನಾಮತಃ
ಅಕ್ಷರೋ ಯೋಽಜರಃ ಸರ್ವದೈವಾಮೃತಃ
ಕುಕ್ಷಿಗಂ ಯಸ್ಯ ವಿಶ್ವಂ ಸದಾಽಜಾದಿಕಂ
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾಖಂಡಮಂಡನೇಂ – ಸರ್ವಜ್ಞ ಸೂಕ್ತಿ.

ಶ್ರೀಕೃಷ್ಣಾರ್ಪಣಮಸ್ತು.
ನಂದನ ಸಂ. ಮಾರ್ಗಶೀರ್ಷ,
ಕೃಷ್ಣ ದಶಮೀ ಗುರುವಾರ, ಮೈಸೂರು,
ಡಿ. ವಾಸುದೇವಾಚಾರ್ಯ.